ಮಲೆನಾಡ ಹೆದ್ದಾರಿಯ ಸೋಲಾರ್ ಬೀದಿ ದೀಪದ ಬ್ಯಾಟರಿ ವ್ಯಾಪಕ ಕಳವು
ಮಂಜೇಶ್ವರ: ಮಲೆನಾಡು ಹೆದ್ದಾರಿಯ ಚೇವಾರು- ನಂದರಪದವು ಮಧ್ಯೆ ಇರುವ ಸೋಲಾರ್ ಬೀದಿ ದೀಪದ ಬ್ಯಾಟರಿಯನ್ನು ವ್ಯಾಪಕವಾಗಿ ಕಳವುಗೈದ ಬಗ್ಗೆ ತಿಳಿದು ಬಂದಿದೆ. 2021ರಲ್ಲಿ ರಸ್ತೆಯ ಕಾಮಗಾರಿ ಪೂರ್ತಿಗೊಂಡಿದ್ದು, ಈ ರಸ್ತೆಯಲ್ಲಿ ಸುಮಾರು 400 ಸೋಲಾರ್ ಬೀದಿ ದೀಪವನ್ನು ರಸ್ತೆ ಬದಿ ಸ್ಥಾಪಿಸಲಾಗಿತ್ತು. ಆ ಬಳಿಕ ಬೀದಿ ದೀಪ ಒಂದೊಂದೇ ಉರಿಯದಾಗಿದ್ದು, ಈ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ತಿಳಿಸಿದ್ದರು. ಪಿಡಬ್ಲ್ಯುಡಿ ಅಧಿಕಾರಿಗಳು ರಸ್ತೆಯ ಕಾಮಗಾರಿ ಗುತ್ತಿಗೆ ವಹಿಸಿದ್ದ ಕಂಪೆನಿಗೆ ತಿಳಿಸಿದ್ದು, ಅವರು ಮಂಜೇಶ್ವರ ಠಾಣೆಗೆ ಕಳವು ಬಗ್ಗೆ ದೂರು ನೀಡಿದ್ದರು. ಆದರೆ ಆ ಬಳಿಕ ತಿಂಗಳು ಕಳೆದರೂ ಯಾವುದೇ ಪ್ರಗತಿ ಉಂಟಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಬೀದಿ ದೀಪ ಕೆಡುತ್ತಿರುವುದನ್ನು ಮನಗಂಡ ಜಿ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ರಸ್ತೆ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ. ಪ್ರಾಧಿಕಾರದ ಅಧಿಕಾರಿಗಳು ತಲುಪಿ ಪರಿಶೀಲಿಸಿದಾಗ 110 ಬ್ಯಾಟರಿಗಳನ್ನು ಕಳವುಗೈದ ಬಗ್ಗೆ ತಿಳಿದು ಬಂದಿದೆ. ಇದಕ್ಕೆ ಸುಮಾರು 11 ಲಕ್ಷ ರೂ. ಮೌಲ್ಯ ಅಂದಾ ಜಿಸಲಾಗಿದೆ. ಕಳವು ವ್ಯಾಪಕವಾದರೂ ಯಾವುದೇ ತನಿಖೆ ಉಂಟಾ ಗದಿರುವುದೇ ಇಷ್ಟು ದೊಡ್ಡ ಮಟ್ಟದಲ್ಲಿ ಕಳವಿಗೆ ಕಾರಣವೆಂದು ಸ್ಥಳೀಯರು ತಿಳಿಸಿದ್ದಾರೆ. ಸಮಗ್ರ ತನಿಖೆಗೆ ಹರ್ಷಾದ್ ವರ್ಕಾಡಿ ಆಗ್ರಹಿಸಿದ್ದಾರೆ.