ಪೆರಿಯ ಅವಳಿ ಕೊಲೆ ಪ್ರಕರಣ: ತೀರ್ಪು ಶೀಘ್ರ ಬಂದರೆ ಚುನಾವಣೆಯಲ್ಲಿ ಪ್ರತಿಫಲನ
ಕಾಸರಗೋಡು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಕಾಸರಗೋಡು ಮಂಡಲದಲ್ಲಿ ಎಡರಂಗದ ಅಭ್ಯರ್ಥಿಗೆ ಬೆದರಿಕೆಯಾಗಬಹುದೆಂದು ನಿರೀಕ್ಷಿಸುವ ಪೆರಿಯ ಅವಳಿ ಕೊಲೆ ಪ್ರಕರಣದಲ್ಲಿ ತೀರ್ಪನ್ನು ಎರ್ನಾಕುಳಂ ಪ್ರತ್ಯೇಕ ಸಿಬಿಐ ನ್ಯಾಯಾಲಯ ಶೀಘ್ರವೇ ಘೋಷಿಸಲಿದೆ ಎಂಬ ಸೂಚನೆ ಇದೆ. ಆರೋಪಿಗಳಿಗೆ ಶಿಕ್ಷೆ ಘೋಷಣೆಯಾದರೆ ಚುನಾವಣೆಯಲ್ಲಿ ಅದರ ಪ್ರತಿಫಲನ ಉಂಟಾಗಬಹುದೆಂದು ಸಾಮಾನ್ಯ ನಿರೀಕ್ಷೆ ಇದೆ. ಪೆರಿಯ ಕಲ್ಯೋಟ್ ನಿವಾಸಿಗಳಾದ ಯೂತ್ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಶರತ್ ಲಾಲ್- ಕೃಪೇಶ್ ಎಂಬಿವರನ್ನು ಕೊಲೆಗೈದ ಪ್ರಕರಣ ಈಗ ಸಿಬಿಐ ನ್ಯಾಯಾಲಯದಲ್ಲಿ ಪರಿಗಣನೆಯಲ್ಲಿದೆ. ಮಾಜಿ ಶಾಸಕ ಸಿಪಿಎಂ ಮುಖಂಡನಾಗಿರುವ ಕೆ.ವಿ. ಕುಂಞಿರಾಮನ್, ಕಾಞಂಗಾಡ್ ಬ್ಲೋಕ್ ಪಂ. ಅಧ್ಯಕ್ಷ ಸಿಪಿಎಂ ಸ್ಥಳೀಯ ಮುಖಂಡ ಪೀತಾಂಬರನ್ ಎಂಬಿವರು ಸೇರಿದಂತೆ ೨೪ ಆರೋಪಿಗಳು ಈ ಕೇಸಿನಲ್ಲಿದ್ದಾರೆ. ಪೀತಾಂಬರನ್ ಪ್ರಥಮ ಆರೋಪಿಯಾಗಿರುವ ಈ ಘಟನೆ ೨೦೧೯ ಫೆಬ್ರವರಿಯಲ್ಲಿ ನಡೆದಿತ್ತು.