ಕೋಳಿ ಅಂಗಡಿ ಮಾಲಕ ಸಹಿತ ಇಬ್ಬರಿಗೆ ಇರಿತ: ಆರೋಪಿಯ ಬಂಧನ
ಕುಂಬಳೆ: ಕೋಳಿ ಮಾಂಸ ಸಾಲ ನೀಡಿಲ್ಲವೆಂಬ ದ್ವೇಷದಿಂದ ಅಂಗಡಿಯ ಮಾಲಕ ಸಹಿತ ಇಬ್ಬರಿಗೆ ಇರಿದು ಗಾಯಗೊಳಿಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕುಂಬಳೆ ಶಾಂತಿಪಳ್ಳ ನಿವಾಸಿ ಆರಿಫ್ (44) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ಆತನಿಗೆ ರಿಮಾಂಡ್ ವಿಧಿಸಲಾಗಿದೆ. ತಿಂಗಳ ಹಿಂದೆ ಈ ಘಟನೆ ನಡೆದಿದೆ. ಕುಂಬಳೆಯ ಮಾರ್ಕೆಟ್ ರೋಡ್‌ನಲ್ಲಿರುವ ಮಾಟೆಂಗುಳಿ ನಿವಾಸಿ ಅನ್ವರ್ ಕೆ.ಎ. (44) ಎಂಬವರ ಕೋಳಿ ಅಂಗಡಿಗೆ ತಲುಪಿದ ಆರಿಫ್ ಕೋಳಿ ಸಾಲ ಕೇಳಿದ್ದನೆನ್ನಲಾಗಿದೆ. ಸಾಲ ನೀಡುವುದಿಲ್ಲವೆಂದು ತಿಳಿಸಿದಾಗ ಅನ್ವರ್‌ರೊಂದಿಗೆ ಆರಿಫ್ ವಾಗ್ವಾದ ನಡೆಸಿ ಹಲ್ಲೆಗೈbದು ಅವರಿಗೆ ಇರಿದಿದ್ದಾನೆನ್ನಲಾಗಿದೆ. ತಡೆಯಲು ಯತ್ನಿಸಿದ ಕಂಚಿಕಟ್ಟೆಯ ಇಬ್ರಾಹಿಂ ಕೆ.ಎ. (43) ಎಂಬಿವರಿಗೂ ಆರಿಫ್ ಇರಿದಿದ್ದಾನೆಂದು ದೂರಲಾಗಿದೆ. ಇರಿತದಿಂದ ಗಾಯಗೊಂಡ ಅನ್ವರ್ ಹಾಗೂ ಇಬ್ರಾಹಿಂ ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ಘಟನೆಗೆ ಸಂಬಂಧಿಸಿ ಆರಿಫ್ ವಿರುದ್ಧ ಕುಂಬಳೆ ಪೊಲೀಸರು ನರಹತ್ಯಾ ಯತ್ನ ಕೇಸು ದಾಖಲಿಸಿಕೊಂಡಿದ್ದರು. ಬಳಿಕ ಆರಿಫ್ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದನು. ಅದನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಅನಂತರ ಆರಿಫ್ ಕುಂಬಳೆ ಠಾಣೆಗೆ ತಲುಪಿಸಿ ಶರಣಾಗಿದ್ದಾನೆ. ಈ ವೇಳೆ ಆತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.