ಊಜಂಗೋಡ್ ತಿರುವಿನಲ್ಲಿ ಅಪಘಾತ ಕೈಬೀಸಿ ಕರೆಯುತ್ತಿದೆ: ಅಧಿಕಾರಿಗಳು ಎಚ್ಚೆತ್ತುಕೊಳ್ಳಲು ಸ್ಥಳೀಯರ ಆಗ್ರಹ

ಮಾನ್ಯ: ವಿದ್ಯಾನಗರ -ಎರ್ದುಂಕಡವ್- ಕಲ್ಲಕಟ್ಟ ಜಿಲ್ಲಾ ಪಂಚಾಯತ್ ರಸ್ತೆಯ ಊಜಂಗೋಡ್ ತಿರುವಿನಲ್ಲಿ ಅಪಾಯ ಭೀತಿ ಹೆಚ್ಚಾಗಿದೆ. ಇಲ್ಲಿ ರಸ್ತೆಗೆ ಅಗಲ ಇಲ್ಲದಿರುವುದು ಹಾಗೂ ಸುರಕ್ಷಿತ ವ್ಯವಸ್ಥೆಗಳ ಕೊರತೆ ಅಪಾಯವನ್ನು ಹೆಚ್ಚಿಸಿದೆ. ಒಂದು ವಾಹನ ಹಾದು ಹೋಗುವಾಗ ಇನ್ನೊಂದು ವಾಹನಕ್ಕೆ ಸುರಕ್ಷಿತವಾಗಿ ಹಾದು ಹೋಗಲು ಸಾಕಷ್ಟು ಸ್ಥಳವಿಲ್ಲದ ಸ್ಥಿತಿ ಇದೆ. ರಸ್ತೆಯ ಎರಡೂ ಬದಿಗಳು ಕುಸಿದ ಕಾರಣ ವಾಹನಗಳನ್ನು ಬದಿಗೆ ಸರಿಸುವಾಗ ಅಪಾಯ ಸಾಧ್ಯತೆ ಹೆಚ್ಚುತ್ತಿದೆ. ರಸ್ತೆ ಇಕ್ಕೆಲಗಳಲ್ಲಿ ತಗ್ಗು ಪ್ರದೇಶವಾದ ಭತ್ತದ ಗದ್ದೆಗಳಿವೆ. ಅಗತ್ಯದ ತಡೆಗೋಡೆ ಅಥವಾ ರಕ್ಷಣಾ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣಿಕರು ಭಯದಲ್ಲಿ ಸಂಚರಿಸಬೇಕಾಗುತ್ತಿದೆ. ತಿರುವಿನಲ್ಲೇ ರಸ್ತೆ ಬದಿ ಪೊದೆಗಳು ಬೆಳೆದಿದ್ದು, ಪಾಳು ಬಾವಿ ಕೂಡಾ ಇಲ್ಲಿದೆ. ಇದು ಇನ್ನಷ್ಟು ಆತಂಕ ಮೂಡಿಸುತ್ತಿದೆ.

ದಿನಂಪ್ರತಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಪ್ರಯಾಣಿಕರು ಸಂಚರಿಸುವ ರಸ್ತೆ ಇದಾಗಿದೆ. ಬಸ್ ಸಹಿತ ಹಲವಾರು ವಾಹನಗಳು ಈ ಅಪಾಯಕಾರಿ ರಸ್ತೆ ಮೂಲಕವೇ ಹಾದು ಹೋಗುತ್ತಿವೆ. ರಸ್ತೆ ಬಗ್ಗೆ ಪರಿಚಯವಿಲ್ಲದ ಚಾಲಕರಿಗೆ ತಿರುವಿನ ಅಪಾಯದ ಸ್ಥಿತಿಯನ್ನು ಪಕ್ಕನೆ ಗುರುತಿಸಲು ಸಾಧ್ಯವಾಗದೆ ಅಪಾಯ ಉಂಟಾಗಲು ಸಾಧ್ಯತೆ ಇದೆ. ರಸ್ತೆಯ ಅಗಲವನ್ನು ಹೆಚ್ಚಿಸುವುದು, ಕುಸಿದ ಭಾಗಗಳನ್ನು ಪುನರ್ ನಿರ್ಮಿಸುವುದು, ಸುರಕ್ಷಿತ ತಡೆಗೋಡೆ ನಿರ್ಮಿಸುವುದು ಮೊದಲಾದ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಅಪಘಾತ ಸಂಭವಿಸಿದ ನಂತರ ಕ್ರಮ ಕೈಗೊಳ್ಳುವ ಬದಲು ಮುನ್ನೆಚ್ಚರಿಕೆ ವಹಿಸಿ ಪ್ರಯಾಣಿಕರ ಭದ್ರತೆಯನ್ನು ಖಚಿತಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page