ತಿರುವನಂತಪುರ: ಕಣ್ಣೂರು ಎಡಿಎಂ ಆಗಿದ್ದ ನವೀನ್‌ಬಾಬು ಅವರ ಸಾವಿಗೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ. ರಾಜ್ಯ ಸಚಿವ ಸಂಪುಟ ಸಭೆ ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದೆ. ಎಡಿಎಂ ನವೀನ್‌ಬಾಬು ಅವರ ಪುತ್ರಿ ನಿರಂಜನ ನಾಯರ್‌ಗೆ ಆಶ್ರಿತ ನೇಮಕಾತಿ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
2024 ಅಕ್ಟೋಬರ್ 15ರಂದು ಮುಂಜಾನೆ ನವೀನ್‌ಬಾಬು ಕಣ್ಣೂರು ಪಳ್ಳಿಕುನ್ನುನಲ್ಲಿರುವ ಕ್ವಾರ್ಟರ್ಸ್‌ನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಪೆಟ್ರೋಲ್ ಪಂಪ್‌ಗಿರುವ ಅರ್ಜಿಯ ಮೇಲೆ ಕ್ರಮ ಕೈಗೊಳ್ಳಲು ವಿಳಂಬವಾದ ಹೆಸರಲ್ಲಿ ಅಂದಿನ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿದ್ದ ಪಿ.ಪಿ. ದಿವ್ಯ ಬಹಿರಂಗವಾಗಿ ನಿಂದಿಸಿದುದರಿಂದ ಮನನೊಂದು ನವೀನ್‌ಬಾಬು ಆತ್ಮಹತ್ಯೆಗೈದಿರುವುದಾಗಿ ಪ್ರಕರಣ ದಾಖಲಾಗಿದೆ. ಪತ್ತನಂತಿಟ್ಟಕ್ಕೆ ವರ್ಗಾವಣೆಗೊಂಡ ನವೀನ್‌ಬಾಬು ಅವರಿಗೆ ಸಹೋದ್ಯೋಗಿಗಳು ಕಲೆಕ್ಟ್ರೇಟ್‌ನಲ್ಲಿ ಏರ್ಪಡಿಸಿದ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲದೆ ತಲುಪಿದ ಪಿ.ಪಿ. ದಿವ್ಯ ನಿಂದಿಸಿ ಭಾಷಣ ಮಾಡಿರುವುದಾಗಿ ದೂರಲಾಗಿದೆ.







