ಕುಂಬಳೆ: ಮಾದಕ ಪದಾರ್ಥ ಪ್ರಕರಣದಲ್ಲಿ ಸಿಲುಕಿಸಲು, ವ್ಯಕ್ತಿ ಹತ್ಯೆ ನಡೆಸಲು ಪೈವಳಿಕೆ ಪಂಚಾಯತ್ ಸದಸ್ಯ ಸಕರಿಯಾ ಯಾನೆ ಜೆಕ್ಕಿ ಯತ್ನಿಸುತ್ತಿರುವುದಾಗಿ ಚಿಪ್ಪಾರು ನಿವಾಸಿಯಾದ ಯುವಕ ಉಮ್ಮರ್ ಫಾರೂಕ್ ಆರೋಪಿಸಿದ್ದಾರೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿದ ದೂರಿನಲ್ಲಿ ಪಂಚಾಯತ್ ಸದಸ್ಯನ ವಿರುದ್ಧ ಅವರು ಗಂಭೀರ ಆರೋಪ ಹೊರಿಸಿದ್ದಾರೆ. ತನ್ನ ಮಾಲಕತ್ವದಲ್ಲಿರುವ ಆಲ್ಟೋ ಕಾರಿನಲ್ಲಿ ಮಾದಕ ಪದಾರ್ಥವಿದೆಯೆಂದು ತಿಳಿಸಿ ನಿರಂತರ ವಾಹನ ತಪಾಸಣೆಗೊಳಪಡಿಸಿ ಮಾನಸಿಕವಾಗಿ ಪೀಡಿಸುತ್ತಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಗಲ್ಫ್ ನಂಬ್ರಗಳಿಂದ ಕರೆಮಾಡಿ ಕೇರಳ, ಕರ್ನಾಟಕ ಪೊಲೀಸರಿಗೆ ತಪ್ಪು ಮಾಹಿತಿ ನೀಡಿ ತನ್ನನ್ನು ಬೇಟೆಯಾಡು ತ್ತಿರುವುದಾಗಿ ಉಮ್ಮರ್ ಫಾರೂಕ್ ದೂರಿನಲ್ಲಿ ತಿಳಿಸಿದ್ದಾರೆ. ತಾನು ಕಾನೂನು ಅನುಸಾರವಾಗಿ ವ್ಯಾಪಾರ ನಡೆಸುವ ವ್ಯಕ್ತಿಯಾಗಿದ್ದು, ಇದುವರೆಗೆ ತನ್ನ ಭಾಗದಿಂದ ಕಾನೂನು ವಿರುದ್ಧವಾದ ಯಾವುದನ್ನೂ, ಕೇರಳ, ಕರ್ನಾಟಕ ಪೊಲೀಸರಿಗೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ಸಕರಿಯಾರ ಮಣ್ಣು ಸಾಗಾಟ ದಂಧೆ ಕರ್ನಾಟಕ ಪೊಲೀಸರು ಪತ್ತೆಹಚ್ಚಿ ವಾಹನಗಳನ್ನು ಹಾಗೂ ಯಂತ್ರಗಳನ್ನು ಕಸ್ಟಡಿಗೆ ತೆಗೆದ ಘಟನೆಯಲ್ಲಿ ದೂರು ನೀಡಿರುವುದು ತಾನಾಗಿದ್ದೇನೆ ಎಂದು ತಪ್ಪಾಗಿ ತಿಳಿದು ನನ್ನನ್ನು ಕೇಸಿನಲ್ಲಿ ಸಿಲುಕಿಸಲು ಯತ್ನಿಸುತ್ತಿರುವುದಾಗಿಯೂ, ನನ್ನ ಜೀವಕ್ಕೆ ಬೆದರಿಕೆ ಇದೆಯೆಂದು ಉಮ್ಮರ್ ಫಾರೂಕ್ ಪೊಲೀಸ್ ಅಧಿಕಾರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.







