ಬದಿಯಡ್ಕ: ಪಂಚಾಯತ್ನ 5ನೇ ವಾರ್ಡ್ ಮೂಕಂಪಾರೆ ಇಕ್ಕೇರಿ ಉನ್ನತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿದ್ದ 8 ಕುಟುಂಬಗಳಿಗೆ ಬಿಜೆಪಿ ವಾರ್ಡ್ ಸಮಿತಿ ವತಿಯಿಂದ ಕುಡಿಯುವ ನೀರು ವ್ಯವಸ್ಥೆ ಮಾಡಲಾಯಿತು. ಚುನಾವಣೆ ವೇಳೆ ವಾರ್ಡ್ನಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಉನ್ನತಿಗೆ ಕುಡಿಯುವ ನೀರು ವಿತರಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಚುನಾವಣೆಯಲ್ಲಿ ಸೋಲು ಅನುಭವಿಸಿದರೂ ವಾರ್ಡ್ ಸಮಿತಿ ನೀಡಿದ ಭರವಸೆಯನ್ನು ಪಾಲಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಉನ್ನತಿಗೆ ನೀರು ವಿತರಿಸಿ ೫ನೇ ವಾರ್ಡ್ ಬಿಜೆಪಿ ಸಮಿತಿ ಜನ್ಮ ದಿನಾಚರಣೆಯನ್ನು ಸಾರ್ಥಕಗೊಳಿಸಿದೆ. ಪಂಚಾಯತ್ ಅಧ್ಯಕ್ಷ ಡಿ. ಶಂಕರ ಉದ್ಘಾಟಿಸಿದರು. ಅವರು ಮಾತನಾಡಿ, ಬಾಂಜತ್ತಡ್ಕ ಇಕ್ಕೇರಿ ಪರಿಶಿಷ್ಟ ಜಾತಿ ಉನ್ನತಿಯ 8 ಕುಟುಂಬಗಳಿಗೆ ಕುಡಿಯುವ ನೀರು ಒದಗಿಸಿದ ಕಾರ್ಯ ಶ್ಲಾಘನೀಯವಾಗಿದ್ದು, ಬಿಜೆಪಿ ವಾರ್ಡ್ ಸಮಿತಿಯ ಈ ಕಾಳಜಿ ಇತರರಿಗೂ ಮಾದರಿ ಎಂದರು.
ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ ಮಾತನಾಡಿ, ದಶಕದಿಂದ ಕುಡಿಯುವ ನೀರಿಗೆ ಸಮಸ್ಯೆ ಅನುಭವಿಸುತ್ತಿದ್ದ ಈ ಕುಟುಂಬಗಳಿಗೆ ವಾರ್ಡ್ ಸಮಿತಿ ಸ್ಪಂದಿಸಿರುವುದು ಬಿಜೆಪಿ ಜನಪರ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವುದಕ್ಕೆ ಸಾಕ್ಷಿಯಾಗಿದೆ ಎಂದು ನುಡಿದರು. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ, ಸ್ಥಾಯಿ ಸಮಿತಿ ಅಧ್ಯಕ್ಷ ಅವಿನಾಶ್ ರೈ, ಸದಸ್ಯ ಶ್ಯಾಮ್ ಪ್ರಸಾದ ಸರಳಿ, ಬಿಜೆಪಿ ಪಂ. ಸಮಿತಿ ಅಧ್ಯಕ್ಷ ಉದನೇಶ್ವರ, ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ, ಸುನಿಲ್ ಕಿನ್ನಿಮಾಣಿ, ಕುಮಾರ ಇಕ್ಕೇರಿ, ದಾಮೋದರ ಚೆಟ್ಟಿಯಾರ್, ನೇಮಿರಾಜ್, ಮಂಜುನಾಥ ಇಕ್ಕೇರಿ, ಕೃಷ್ಣ ಬಾಂಜತ್ತಡ್ಕ ನೇತೃತ್ವ ವಹಿಸಿದರು.





