ಈಶ್ವರ ಮಲ್ಪೆ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ: ಶಿರಿಯ ಹೊಳೆಯಲ್ಲಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಕುಂಬಳೆ: ಹೊಳೆಯಿಂದ ಹೊಯ್ಗೆ ಸಂಗ್ರಹಿಸುತ್ತಿದ್ದ ವೇಳೆ ಅಲ್ಲಿಗೆ ತಲುಪಿದ ಪೊಲೀಸರನ್ನು ಕಂಡು ದೋಣಿಯಿಂದ ಹೊಳೆಗೆ ಹಾರಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಆರಿಕ್ಕಾಡಿ ಕಡವತ್ ನಿವಾಸಿ ಇಬ್ರಾಹಿಂ (35) ಎಂಬವರ ಮೃತದೇಹವನ್ನು  ಶಿರಿಯ ಅಳಿವೆಬಾಗಿಲಿನಲ್ಲಿ  ನಡೆಸಿದ ಶೋಧ ವೇಳೆ ಪತ್ತೆಹಚ್ಚಲಾಗಿದೆ. ನಾಪತ್ತೆಯಾದ ಸ್ಥಳದ ಸಮೀಪದ ಹೊಳೆಯಲ್ಲಿ ಮೀನು ಕಾರ್ಮಿಕರ ಬಲೆಯಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿ ಮೃತದೇಹ ಇತ್ತೆಂದು ತಿಳಿದುಬಂದಿದೆ.  ರಕ್ಷಣಾ ಕಾರ್ಯಾಚರಣೆಗಾಗಿ  ಮುಳುಗುತಜ್ಞ ಈಶ್ವರ ಮಲ್ಪೆ ಹಾಗೂ ತಂಡ ಇಂದು ಮುಂಜಾನೆ  ಶಿರಿಯಕ್ಕೆ ತಲುಪಿತ್ತು. ಇವರ ನೇತೃತ್ವದಲ್ಲಿ ನಡೆಸಿದ ಶೋಧ ವೇಳೆ ಮೃತದೇಹ ಪತ್ತೆಯಾಗಿದೆ.  ವಿಷಯ ತಿಳಿದು ಕುಂಬಳೆ ಕರಾವಳಿ ಪೊಲೀಸರು ಸ್ಥಳಕ್ಕೆ ತಲುಪಿದ್ದರು.ಮೃತದೇಹವನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಗಿದೆ.

ಕಳೆದ ಸೋಮವಾರ ರಾತ್ರಿ 8 ಗಂಟೆ ವೇಳೆ ಇಬ್ರಾಹಿಂ ಹೊಳೆಯಲ್ಲಿ ನಾಪತ್ತೆಯಾಗಿದ್ದರು. ಶಿರಿಯ ಹೊಳೆಯಲ್ಲಿ ಅನಧಿಕೃತವಾಗಿ ಹೊಯ್ಗೆ ಸಂಗ್ರಹ ನಡೆಯುತ್ತಿದೆ ಯೆಂಬ ಮಾಹಿತಿಯ ಹಿನ್ನೆಲೆಯಲ್ಲಿ ಕರಾವಳಿ ಪೊಲೀಸರು ಅಲ್ಲಿಗೆ ತಲುಪಿದ್ದರು. ಪೊಲೀಸರನ್ನು ಕಂಡೊಡನೆ ಹೊಯ್ಗೆ ಸಂಗ್ರಹಿಸುತ್ತಿದ್ದ ವರು ದೋಣಿ ಉಪೇಕ್ಷಿಸಿ ಹೊಳೆಗೆ ಹಾರಿದ್ದರು. ಈ ವೇಳೆ ಇಬ್ಬರು ನೀರಿನಲ್ಲಿ ಈಜಿ ದಡ ಸೇರಿದ್ದರು. ಆದರೆ ಇಬ್ರಾಹಿಂ ಹೊಳೆಯಲ್ಲಿ ನಾಪತ್ತೆಯಾಗಿದ್ದರು. ಅವರನ್ನು ರಕ್ಷಿಸಲು ಕರಾವಳಿ ಪೊಲೀಸರು, ಕುಂಬಳೆ ಪೊಲೀಸರು ಹಾಗೂ ಮೀನು ಕಾರ್ಮಿಕರು ಕಳೆದ ಮೂರು ದಿನಗಳಿಂದ ನಿರಂತರ ಶೋಧ ನಡೆಸುತ್ತಿದ್ದರು. ಆದರೂ ಪತ್ತೆಹಚ್ಚ ಲಾಗದ ಹಿನ್ನೆಲೆಯಲ್ಲಿ ಮುಳುಗುತಜ್ಞ ಈಶ್ವರ ಮಲ್ಪೆ ಅವರನ್ನು ಇಲ್ಲಿಗೆ ಕರೆಸಿ ಶೋಧ ನಡೆಸಲಾಗಿತ್ತು.

ಆರಿಕ್ಕಾಡಿ ಕಡವತ್ತ್‌ನ ಅಬ್ದುಲ್ ಖಾದರ್-ಸೈನಬ ದಂಪತಿಯ ಪುತ್ರನಾದ ಮೃತರು ಸಹೋದರ-ಸಹೋದರಿಯರಾದ ಹನೀಫ, ಮುನೀರ್, ಶಂಸೀರ್, ಫೌಸಿಯ, ಸೌದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page