ಕಾಸರಗೋಡು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪಿ.ಎಂ. ಸುರೇಶ್ ಅವರು ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು ನಾಲ್ಕು ವರ್ಷ, ಒಂದು ತಿಂಗಳ ಕಠಿಣ ಸಜೆ ಹಾಗೂ 16,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಹೊಸದುರ್ಗ ಕುಶಾಲನಗರದ ವಿನೋದ್ ಕುಮಾರ್ (52) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳು ಹಾಗೂ ೨ ವಾರ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
2024 ಎಪ್ರಿಲ್ 28ರಂದು 14ರ ಹರೆಯದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ಹಾಗೂ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದು ಹೊಸದುರ್ಗ ಎಸ್‌ಐ ಆಗಿದ್ದ ಧರ್ಮರಾಜನ್ ಈ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ಪ್ರೋಸಿಕ್ಯೂಶನ್ ಪರವಾಗಿ ಸ್ಪೆಷಲ್ ಪ್ರೋಸಿಕ್ಯೂಟರ್ ಎಂ. ಗಂಗಾಧರನ್ ನ್ಯಾಯಾಲಯದಲ್ಲಿ ವಾದಿಸಿದ್ದಾರೆ.







