ತಿರುವನಂತಪುರ: ಮುಖ್ಯಮಂತ್ರಿ ವಿ.ಡಿ. ಸತೀಶನ್ ಮತ್ತು ಕುಟುಂಬಕ್ಕೆ ಫೋನ್ ಮೂಲಕ ಕೊಲೆ ಬೆದರಿಕೆಯೊಡ್ಡಲಾಗಿದೆ.
ತಿರುವನಂತಪುರ ಸಿಟಿ ಪೊಲೀಸ್ ಕಮಾಂಡಿಂಗ್ ಸೆಂಟರಿನ ಅಧಿಕೃತ ಫೋನ್ ಸೆಂಟರಿಗೆ ಈ ಬೆದರಿಕೆ ಫೋನ್ ಕರೆ ಮಾಡಲಾಗಿದೆ. ಆ ಫೋನ್ ನಂಬರಿನ ಜಾಡು ಹಿಡಿದು ಪೊಲೀಸರು ತಕ್ಷಣ ನಡೆಸಿದ ಕಾರ್ಯಾಚರಣೆಯಲ್ಲಿ ಫೋನ್ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಿರುವನಂತಪುರದಲ್ಲಿ ಚಿರಯಿಲ್‌ಕೀಳ್ ನಿವಾಸಿ ಟೋನಿ ಎಂಬಾತ ಬಂಧಿತ ವ್ಯಕ್ತಿ. ಈತ ಸಿಟಿ ಪೊಲೀಸ್ ಕಮಾಂಡಿಂಗ್ ಸೆಂಟರಿಗೆ ನಿನ್ನೆ ಸಂಜೆ ಹಲವು ಬಾರಿ ಫೋನ್ ಕರೆ ಮಾಡಿದ್ದನು. ಮುಖ್ಯಮಂತ್ರಿ ಮತ್ತು ಅವರ ಕುಟುಂಬದವರನ್ನು ಹತ್ಯೆಗೈದು ಆಮೂಲಕ ನನಗೆ ಖ್ಯಾತಿ ಪಡೆಯಬೇಕೆಂದು ಆತ ಫೋನ್ ಕರೆ ಮೂಲಕ ಬೆದರಿಕೆಯೊಡ್ಡಿದ್ದಾನೆ. ಆ ಬಗ್ಗೆ ಸಿಟಿ ಪೊಲೀಸ್ ಕಮಾಂಡಿಂಗ್ ಸೆಂಟರಿನ ಡ್ಯೂಟಿ ಅಧಿಕಾರಿ ಸುರೇಶ್ ಕುಮಾರ್ ತಕ್ಷಣ ಕಂಟೋನ್‌ಮೆಂಟ್ ಪೊಲೀಸರಿಗೆ ದೂರು ನೀಡಿದರು. ತಡಮಾಡದೆ ಪೊಲೀಸರು ಆ ಬಗ್ಗೆ ಆರೋಪಿಯ ವಿರುದ್ಧ ಬಿ.ಎನ್.ಎಸ್‌ನ ಸೆಕ್ಷನ್ 353(1)(ಬಿ), 351(4), 296 (ಬಿ) ಮತ್ತು ಕೇರಳ ಪೊಲೀಸ್ ಆಕ್ಟ್ 120(0) ಎಂಬೀ ಸೆಕ್ಷನ್‌ಗಳ ಪ್ರಕಾರ ಎಫ್‌ಐಆರ್ ದಾಖಲಿಸಿಕೊಂಡು ಫೋನ್ ಕರೆ ನಂಬ್ರ ಕೇಂದ್ರೀಕರಿಸಿ ನಡೆಸಿದ ಶೋಧದಲ್ಲಿ ಈ ಕೊಲೆ ಬೆದರಿಕೆಯೊಡ್ಡಿದ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಆರೋಪಿಯನ್ನು ಪೊಲೀಸರು ಸಮಗ್ರ ವಿಚಾರಣೆಗೊಳಪಡಿ ಸತೊಡಗಿದ್ದಾರೆ. ಈ ಬೆದರಿಕೆ ಬಂದ ಬೆನ್ನಲ್ಲೇ ಪೊಲೀಸರು ಮುಖ್ಯಮಂತ್ರಿ ಮತ್ತು ಅವರ ಕುಟುಂಬಕ್ಕೆ ಇನ್ನಷ್ಟು ಹೆಚ್ಚಿನ ಭದ್ರತೆ ಒದಗಿಸಲು ಮುಂದಾಗಿದ್ದು, ಆಗ ನನಗೆ ಈಗಿರುವ ಭದ್ರತೆ ಮಾತ್ರ ಸಾಕೆಂದೂ ಹೆಚ್ಚುವರಿ ಭದ್ರತೆಯ ಅಗತ್ಯವಿಲ್ಲವೆಂದು ಪೊಲೀಸರಲ್ಲಿ ತಿಳಿಸಿದ್ದಾರೆ. ಬಂಧಿತ ಆರೋಪಿಯ ಮಾನಸಿಕ ಸ್ಥಿತಿಗತಿಯ ಬಗ್ಗೆಯೂ ತನಿಖೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.







