ಕೊಲ್ಲಂ: ಮಂತ್ರವಾದಕ್ಕೆ ಒಪ್ಪದ ಪತ್ನಿಯ ಮುಖಕ್ಕೆ ಕುದಿಯುವ ಮೀನಿನ ಪದಾರ್ಥ ಎರಚಿ ಪತಿಯೋರ್ವ ಕ್ರೂರತೆ ತೋರಿದ ಘಟನೆ ಕೊಲ್ಲಂನಲ್ಲಿ ನಡೆದಿದೆ. ಕೊಲ್ಲಂ ಆಯೂರ್‌ನ ರಜಿಲ ಎಂಬಾಕೆ ಪತಿ ಸಜೀರ್ ನಡೆಸಿದ ಕೃತ್ಯದಿಂದ ಸುಟ್ಟು ಗಾಯಗೊಂಡಿದ್ದಾಳೆ. ದಂಪತಿ ಮಧ್ಯೆ ನಿರಂತರ ಜಗಳ ನಡೆಯುತ್ತಿತ್ತೆನ್ನಲಾಗಿದೆ. ಪತ್ನಿಯ ದೇಹಕ್ಕೆ ಪಿಶಾಚಿ ಸೇರಿಕೊಂಡಿರುವುದೇ ಜಗಳಕ್ಕೆ ಕಾರಣವೆಂದು ಸಜೀರ್ ನಂಬಿದ್ದನು. ದೇಹದಿಂದ ಪಿಶಾಚಿಯನ್ನು ಹೊರತುಪಡಿಸಲು ಅವರಿಬ್ಬರು ಆಯೂರಿನಲ್ಲಿರುವ ಓರ್ವ ಮಂತ್ರವಾದಿಯನ್ನು ಸಂಪರ್ಕಿಸಿದ್ದರು. ಪಿಶಾಚಿ ಬಾಧೆ ತೊಲಗಿಸಲು ಮಂತ್ರವಾದಿ ಮಂತ್ರವಾದ ನಡೆಸಿ ಅವರನ್ನು ಮರಳಿ ಕಳುಹಿಸಿದ್ದನು. ಮನೆಗೆ ಮರಳಿದ ಅನಂತರವೂ ದಂಪತಿ ಮಧ್ಯೆ ಜಗಳ ನಡೆದಿತ್ತು. ಇದರಿಂದ ಸಜೀರ್ ಮತ್ತೊಮ್ಮೆ ಮಂತ್ರವಾದಿಯನ್ನು ಭೇಟಿಯಾಗಿ ಭಸ್ಮ, ತಗಡು ತಂದಿದ್ದನು. ಬಳಿಕ ಮಂತ್ರವಾದ ನಡೆಸಲು ತನ್ನ ಎದುರು ಕುಳಿತುಕೊಳ್ಳುವಂತೆ ಸಜೀರ್ ಪತ್ನಿಯಲ್ಲಿ ತಿಳಿಸಿದ್ದನು. ಆದರೆ ಮಂತ್ರವಾದ ಮೂಢನಂಬಿಕೆಯೆಂದು ತಿಳಿಸಿ ರಜಿಲ ಅದನ್ನು ವಿರೋಧಿಸಿದ್ದಳು. ಇದರಿಂದ ರೋಷಗೊಂಡ ಸಜೀರ್ ಒಲೆಯಲ್ಲಿ ಕುದಿಯುತ್ತಿದ್ದ ಮೀನು ಸಾರನ್ನು ತಂದು ಪತ್ನಿಯ ಮುಖಕ್ಕೆ ಎರಚಿದ್ದಾನೆನ್ನಲಾಗಿದೆ.
ರಜಿಲಳ ಬೊಬ್ಬೆ ಕೇಳಿ ತಲುಪಿದ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ. ಈ ಮಧ್ಯೆ ಸಜೀರ್ ಮನೆಯಿಂದ ಓಡಿ ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ಪೊಲೀಸರು ಕೇಸು ದಾಖಲಿಸಿ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.







