ಕಾಸರಗೋಡು: ಕಾಸರಗೋಡು ಕಲೆಕ್ಟ್ರೇಟ್‌ನ ಸೀನಿಯರ್ ಕ್ಲರ್ಕ್, ಚೆಂಗಳ ಅದ್ರುಕುಳಿ ನಿವಾಸಿಯಾದ ಆಶಾಲತಾ (೪೧)ರ ಸಾವಿಗೆ ಸಂಬಂಧಿಸಿ ಎಡಿಎಂ ನಡೆಸಿದ ತನಿಖಾ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು. ಆಶಾಲತಾರ ಆತ್ಮಹತ್ಯೆಗೆ ಕಾರಣ ವರ್ಗಾವಣೆ ಅಥವಾ ಕೆಲಸದ ಒತ್ತಡ ಅಲ್ಲವೆಂದು ವರದಿಯಲ್ಲಿ ತಿಳಿಸಲಾಗಿದೆ. ಐದು ವರ್ಷಗಳಿಂದ ಆಶಾಲತಾ ಭಾರೀ ನಿರಾಸೆಯಲ್ಲಿದ್ದರೆಂದೂ ವರದಿಯಲ್ಲಿ ತಿಳಿಸಲಾಗಿದೆ. ಆಶಾಲತಾ ಆಗಸ್ಟ್ ೭ರಂದು ಐಸ್‌ಕ್ರೀಂನೊಂದಿಗೆ ಇಲಿವಿಷ ಬೆರೆಸಿ ಸೇವಿಸಿದ್ದರು. ಇದರಿಂದ ಅಸ್ವಸ್ಥಗೊಂಡ ಅವರಿಗೆ ಮೊದಲು ಚೆಂಗಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಸ್ಥಿತಿ ಗಂಭೀರವಾಗಿದ್ದುದರಿಂದ ಅವರನ್ನು ಕಲ್ಲಿಕೋಟೆಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ೯ರಂದು ಸಾವಿಗೀಡಾಗಿದ್ದರು.
ಚೆಂಗಳದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಪೊಲೀಸರು ಆಶಾಲತಾರ ಹೇಳಿಕೆ ದಾಖಲಿಸಿದಾಗ ಯಾರದೇ ಒತ್ತಡದಿಂದ ವಿಷ ಸೇವಿಸಿದ್ದಲ್ಲವೆಂದು ತಿಳಿಸಿದ್ದರು. ಇದೇ ವೇಳೆ ಎನ್‌ಜಿಒ ಯೂನಿಯನ್ ಜಿಲ್ಲಾ ಕೌನ್ಸಿಲ್ ಸದಸ್ಯರಾಗಿದ್ದ ಆಶಾಲತಾರನ್ನು ವಿನಾಕಾರಣ ಎಂಡೋಸಲ್ಫಾನ್ ಸೆಲ್‌ಗೆ ವರ್ಗಾಯಿಸಿದುದರಿಂದ ಮನನೊಂದು ಅವರು ಆತ್ಮಹತ್ಯೆಗೈದಿರುವುದಾಗಿ ವಿಪಕ್ಷ ನೇತಾರ ಪಿಣರಾಯಿ ವಿಜಯನ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸರಕಾರ ಎಡಿಎಂಗೆ ತಿಳಿಸಿತ್ತು. ಕಂದಾಯ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆಶಾಲ ತಾರನ್ನು ಮೇ ೧೦ರಂದು ಎಂಡೋಸಲ್ಫಾನ್ ಸೆಲ್‌ಗೆ ವರ್ಗಾಯಿಸಲಾಗಿತ್ತೆನ್ನಲಾಗಿದೆ. ಸಾವಿಗೆ ಸಂಬಂಧಿಸಿ ಎಡಿಎಂ ಸಲ್ಲಿಸಿದ ವರದಿಯನ್ನು ಜಿಲ್ಲಾಧಿಕಾರಿ ಶೀಘ್ರ ಸರಕಾರಕ್ಕೆ ಹಸ್ತಾಂತರಿಸಲಿದ್ದಾರೆ.






