ಕಾಸರಗೋಡು: ಜಿಲ್ಲೆಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ (ಎಮ್ಸ್) ಆಸ್ಪತ್ರೆ ಸ್ಥಾಪಿಸಲು ಪೆರಿಯಾದಲ್ಲಿರುವ ಪ್ಲಾಂಟೇಶನ್ ಕಾರ್ಪೋರೇಶನ್ ಆಫ್ ಕೇರಳ (ಪಿಸಿಕೆ) ಸೂಕ್ತ ಸ್ಥಳವೆಂದು ಸ್ಪಷ್ಟಪಡಿಸಿ ಕಾಸರಗೋಡು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ರಾಜ್ಯ ಆರೋಗ್ಯ ಇಲಾಖೆಯ ಕಾರ್ಯದರ್ಶಿಗೆ ಸಮಗ್ರ ಪ್ರಸ್ತಾಪನಾ ವರದಿ ಸಲ್ಲಿಸಿದ್ದಾರೆ.
ಪೆರಿಯಾದಲ್ಲಿರುವ ತೋಟಗಾರಿಕಾ ನಿಗಮಕ್ಕೆ ಸೇರಿದ 274.69 ಎಕ್ರೆ ಪ್ರದೇಶ ಏಮ್ಸ್ ಆಸ್ಪತ್ರೆ ಸ್ಥಾಪಿಸಲು ಸೂಕ್ತ ಸ್ಥಳವಾಗಿದೆ. ಮಾತ್ರವಲ್ಲ ಸಂಪರ್ಕ ರಸ್ತೆ, ಅಗತ್ಯದಷ್ಟು ಜಲವಿದ್ಯುತ್ ಹಾಗೂ ಇತರ ಮೂಲ ಸೌಕರ್ಯಗಳು ಈ ಪ್ರದೇಶದಲ್ಲಿವೆ. ಏಮ್ಸ್ ಸ್ಥಾಪಿಸಲು 2೦೦ ಎಕ್ರೆ ಸ್ಥಳ ಬೇಕೆಂಬುವುದು ಕೇಂದ್ರ ಸರಕಾರದ ಮಾನದಂಡವಾಗಿದೆ. ಅದಕ್ಕಿಂತಲೂ ಹೆಚ್ಚು ಎಂಬಂತೆ ೨೭೪.೬೯ ಎಕ್ರೆ ಸ್ಥಳ ಪೆರಿಯಾದಲ್ಲಿದೆ. ಕಾಸರಗೋಡು ಮತ್ತು ಹೊಸದುರ್ಗ ರೈಲು ನಿಲ್ದಾಣಗಳು, ಮಂಗಳೂರು ಮತ್ತು ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಸೌಕರ್ಯವನ್ನು ಉಪಯೋಗಿಸಬಹುದಾಗಿದೆ.
ಮೈಲಾಟಿ ಪವರ್ ಸ್ಟೇಶನ್ ಮತ್ತು ಮಾವುಂಗಾಲ್ ಸಬ್ ಸ್ಟೇಶನ್‌ಗಳಿಂದ ಅಗತ್ಯದ ವಿದ್ಯುತ್ ಸಂಪರ್ಕವನ್ನು ಖಾತರಿಪಡಿಸಬಹುದಾಗಿ ದೆಯೆಂದೂ ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ.ಕೇರಳದಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪಿಸಲು ಸೂಕ್ತವಾದ ಜಿಲ್ಲೆಗಳ ಪಟ್ಟಿಯನ್ನು ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಸಲ್ಲಿಸಿದು, ಅದರಲ್ಲಿ ಕಾಸರಗೋಡು ಜಿಲ್ಲೆಯನ್ನೂ ಒಳಪಡಿಸಲಾಗಿದೆ. ಇದರಂತೆ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ನಡೆಸಿದ ನಿರಂತರ ಪ್ರಯತ್ನದ ಫಲವಾಗಿ ರಾಜ್ಯ ಸರಕಾರದ ನಿರ್ದೇಶ ಪ್ರಕಾರ ತಜ್ಞರ ತಂಡ ಪೆರಿಯಾಕ್ಕೆ ಸಂದರ್ಶಿಸಿ ಸ್ಥಳ ಪರಿಶೀಲನೆ ನಡೆಸಿತ್ತು. ಅದರ ವರದಿ ಮಾತ್ರವಲ್ಲ ಏಮ್ಸ್‌ಗೆ ಅಗತ್ಯವಿರುವ ಸ್ಥಳದ ರೀ ಸರ್ವೇ ಡಿಜಿಟಲ್ ಸ್ಕೆಚ್, ಡ್ರೋನ್ ದೃಶ್ಯಗಳು ಮತ್ತು ಚಿತ್ರಗಳನ್ನೂ ಜಿಲ್ಲಾಧಿಕಾರಿ ಸರಕಾರಕ್ಕೆ ಸಲ್ಲಿಸಿದ ಸಮಗ್ರ ಪ್ರಸ್ತಾವನಾ ವರದಿಯಲ್ಲಿ ಒಳಪಡಿಸಿದ್ದಾರೆ.






