ಕಗ್ಗಂಟಾಗಿ ಮುಂದುವರಿಯುತ್ತಿರುವ ಮುಖ್ಯಮಂತ್ರಿ ಆಯ್ಕೆ

ತಿರುವನಂತಪುರ: ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಷಯದ ಬಗ್ಗೆ ಕಾಂಗ್ರೆಸ್ ಶಾಸಕರ ಅಭಿಪ್ರಾಯಗಳನ್ನೊಳಗೊಂಡ ವರದಿಯನ್ನು ಕಾಂಗ್ರೆಸ್ ಕೇಂದ್ರ ಸಮಿತಿಯ ವೀಕ್ಷಕರಾದ ಅಜಯ್ ಮಾಖಾನ್ ಮತ್ತು ಮುಕುಲ್ ವಾಸ್ನಿಕ್ ಇಂದು ಕಾಂಗ್ರೆಸ್ ಹೈಕಮಾಂಡ್‌ಗೆ ಸಲ್ಲಿಸುವರು. ಈ ವರದಿಯನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಪರಿಶೀಲಿಸಿದ ಬಳಿಕ ಮುಖ್ಯಮಂತ್ರಿ  ಸ್ಥಾನ ಆಗ್ರಹಿಸುತ್ತಿರುವ ವಿ.ಡಿ. ಸತೀಶ್, ಕಾಂಗ್ರೆಸ್‌ನ ಹಿರಿಯ ನೇತಾರ ರಮೇಶ್ ಚೆನ್ನಿತ್ತಲ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕೆ.ಸಿ. ವೇಣು ಗೋಪಾಲ್‌ರನ್ನು ನೇರವಾಗಿ ದಿಲ್ಲಿಗೆ ಕರೆದು ಅವರೊಂದಿಗೂ ಚರ್ಚೆ ನಡೆಸಿದ ನಂತರವಷ್ಟೇ ಮುಖ್ಯಮಂತ್ರಿ ಪಟ್ಟ ಯಾರಿಗೆ ನೀಡಬೇಕೆಂಬ ವಿಷಯದಲ್ಲಿ ಹೈಕಮಾಂಡ್ ಅಂತಿಮ ತೀರ್ಮಾನಕ್ಕೆ ಬರಲಿದೆ.

ಎಐಸಿಸಿ ವೀಕ್ಷಕರು ನಿನ್ನೆ ಮುಖ್ಯಮಂತ್ರಿ ಯಾರಾಗಬೇಕೆಂಬುದರ ಬಗ್ಗೆ ಕಾಂಗ್ರೆಸ್‌ನ ಎಲ್ಲಾ ಶಾಸಕರ ಮಾತ್ರವಲ್ಲ,

ಯುಡಿಎಫ್ ಘಟಕ ಪಕ್ಷಗಳ ಅಭಿಪ್ರಾಯವನ್ನು ಸಂಗ್ರಹಿಸಿತ್ತು.  ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿಗಳಲ್ಲೋರ್ವರಾಗಿರುವ ಕೆ.ಸಿ. ವೇಣುಗೋಪಾಲ್ ಈಗಾಗಲೇ ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಬೇಡಿಕೆಯಿಂದ ಕೆ.ಸಿ. ವೇಣುಗೋಪಾಲ್ ಒಂದು ವೇಳೆ ಹಿಂದಕ್ಕೆ ಸರಿದಲ್ಲಿ ನಂತರ ಅವರು ಸೂಚಿಸುವ ನೇತಾರರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕಾಗಿ ಬರಲಿದೆ.

ತಮಗೆ ಮುಖ್ಯಮಂತ್ರಿ ಸ್ಥಾನ ಲಭಿಸಬೇಕೆಂಬ ಬಿಗಿ ನಿಲುವಿನಲ್ಲಿ ವಿ.ಡಿ. ಸತೀಶನ್, ರಮೇಶ್ ಚೆನ್ನಿತ್ತಲ ಹಾಗೂ ಕೆ.ಸಿ. ವೇಣುಗೋಪಾಲ್ ಈಗಲೂ ಮುಂದುವರಿದಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿಯ ಆಯ್ಕೆ ಕಾಂಗ್ರೆಸ್ ಹೈಕಮಾಂಡ್‌ಗೆ ಇನ್ನೂ ಒಂದು ಕಗ್ಗಂಟಾಗಿಯೇ ಮುಂದುವರಿಯುತ್ತಿದೆ. ಈ ವಿಷಯದಲ್ಲಿ ಬಿಗಿ ಪಟ್ಟನ್ನು ಕೈಬಿಡಬೇಕು ಮಾತ್ರವಲ್ಲ, ಪರಸ್ಪರ ಸಮನ್ವಯ ನಿಲುವು ತಾಳಬೇಕೆಂದೂ ವೀಕ್ಷಕರ ತಂಡ ನಿರ್ದೇಶ ನೀಡಿದೆ. ಇದೇ ವೇಳೆ ಮುಖ್ಯಮಂತ್ರಿ ಸ್ಥಾನದ ಹೆಸರಲ್ಲಿ ಈ ಮೂವರು ನಾಯಕರ ಬೆಂಬಲಿಗರು ತೊಡಗಿರುವ ಫ್ಲೆಕ್ಸ್‌ಬೋರ್ಡ್ ಯುದ್ಧ ಇನ್ನೂ ಮುಂದುವರಿಯುತ್ತಿದೆ. ಹಲವೆಡೆಗಳಲ್ಲಿ ಇಂತಹ ಫ್ಲೆಕ್ಸ್ ಬೋರ್ಡ್‌ಗಳನ್ನು ನೇತಾರರ ಬೆಂಬಲಿಗರೇ ಪರಸ್ಪರ ಕರಿ ಆಯಿಲ್ ಸುರಿದು ಹಾನಿ ಗೊಳಿಸಿದ್ದಾರೆ.

You cannot copy contents of this page