ಕಾಸರಗೋಡು: ಕಾರಿನಲ್ಲಿ ಗಾಂಜಾ ಸಾಗಿಸಿದ ಪ್ರಕರಣದ ಇಬ್ಬರು ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ರಾಮ ರಮೇಶ್ ಚಂದ್ರಭಾನು ಅವರು ತಲಾ ಒಂದು ವರ್ಷದಂತೆ ಕಠಿಣ ಸಜೆ ಹಾಗೂ ೨೦೦೦೦ ರೂ.ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಹೊಸದುರ್ಗ ಅಜಾನೂರು ಗ್ರಾಮದ ಮೂಲಕಂಡದ ಪ್ರವೀಣ್ ನಿವಾಸದ ವಿ. ಪ್ರವೀಣ್ (43) ಮತ್ತು ಹೊಸದುರ್ಗ ವೆಳ್ಳಿಕೋತ್ತ್ ಕುಂಞ್ಞಪುರಯಿಲ್ ಹೌಸ್‌ನ ಪಿ. ವೈಶಾಖ್ ಅಲಿಯಾಸ್ ಜಿತು (3೦) ಎಂಬವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿಗಳು ಎರಡು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
2012 ಅಕ್ಟೋಬರ್ 1೦ರಂದು ಮುಂಜಾನೆ ಹೊಸದುರ್ಗ ಬಲ್ಲಾ ಗ್ರಾಮದ ಹಳೇ ಬಸ್ ನಿಲ್ದಾಣ ಬಳಿಯ ರಸ್ತೆಯಲ್ಲಿ ಹೊಸದುರ್ಗ- ಕಾಸರಗೋಡು ರಾಜ್ಯ ಹೆದ್ದಾರಿಯ ಅಂದಿನ ಹೊಸದುರ್ಗ ಪೊಲೀಸ್ ಠಾಣೆಯ ಎಸ್‌ಐ ಎ. ಬಾವರ ನೇತೃತ್ವದ ಪೊಲೀಸರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ೨.೦೫೦ ಕಿಲೋ ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಅಂದಿನ ಎಸ್‌ಐ ಶ್ರೀಜೇಶ್ ಈ ಪ್ರಕರಣದ ತನಿಖೆ ಪೂರ್ತೀಕರಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಪ್ರೋಸಿಕ್ಯೂಷನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಜಿ. ಚಂದ್ರ ಮೋಹನ್ ನ್ಯಾಯಾಲಯದಲ್ಲಿ ವಾದಿಸಿದ್ದರು.






