ತಿರುವನಂತಪುರ: ಕೇರಳದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಸಮಗ್ರ ಮಾಹಿತಿಗಳು ಒಳಗೊಂಡ ಶ್ವೇಪತ್ರವನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್ ವಿಧಾನಸಭೆಯಲ್ಲಿ ಇಂದು ಬೆಳಿಗ್ಗೆ ಮಂಡಿಸಿದರು. ಕೇರಳದ ಆರ್ಥಿಕ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಒಟ್ಟು 5.07 ಲಕ್ಷ ಕೋಟಿ ರೂ. ಗಳ ಸಾಲ ಹೊಂದಿದೆ. ಸರಕಾರದ ಒಟ್ಟು ವಾರ್ಷಿಕ ಆದಾಯದಲ್ಲಿ ಶೇ. 77ರಷ್ಟು ಮೊತ್ತವನ್ನು ಸರಕಾರಿ ಸಿಬ್ಬಂದಿಗಳ ವೇತನ, ಪಿಂಚಣಿ ಮತ್ತು ಪಡೆದ ಸಾಲದ ಬಡ್ಡಿ ಪಾವತಿಗಾಗಿ ವಿನಿಯೋಗಿಸಲಾಗುತ್ತಿದೆ. ರಾಜ್ಯದ ಸಾಲದ ಸ್ಥಿತಿ ಮಿತಿಮೀರ ತೊಡಗಿದ್ದು, ಇದನ್ನು ನಿಯಂತ್ರಿಸುವ ಅಗತ್ಯವಿದೆಯೆಂದು ಮುಖ್ಯಮಂತ್ರಿ ಸಲ್ಲಿಸಿದ ಶ್ವೇತಪತ್ರದಲ್ಲಿ ತಿಳಿಸಲಾಗಿದೆ.
ಕೇರಳದ ಸಾರ್ವಜನಿಕ ವಲಯ ಗಳ ಒಟ್ಟು ನಷ್ಟ 78,851 ಕೋಟಿ ರೂ.ಗೇರಿದೆ. ಇದರಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಜಲಪ್ರಾಧಿಕಾರದಿಂದ ಅತೀ ಹೆಚ್ಚು ನಷ್ಟಉಂಟಾಗುತ್ತಿದೆ. ಕೇರಳದ ಆರ್ಥಿಕ ಸ್ಥಿತಿ ಆತಂಕಜನಕವಾಗಿದೆ. ಇದಕ್ಕೆ ದೀರ್ಘಕಾಲದ ಪರಿಹಾರ ಯೋಜನೆ ಕಂಡುಕೊಳ್ಳಬೇಕಾದ ಅಗತ್ಯವಿದೆ. ಇದಕ್ಕಾಗಿ ಖಾಸಗಿ ಬಂಡವಾಳ ಹೂಡಿಕೆ ಹೆಚ್ಚಿಸಬೇಕು, ಕೈಗಾರಿಕಾಭಿವೃದ್ಧಿ, ಹೊಸ ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ಮೂಲಸೌಕರ್ಯಗಳನ್ನು ಅಭಿವೃದ್ಧಿಪ ಡಿಸಬೇಕಾಗಿದೆ. ಇದರ ಜತೆಗೆ ಆರ್ಥಿಕ ಶಿಸ್ತುಕ್ರಮ ಪಾಲಿಸಬೇಕಾಗಿದೆ.
ಕೇರಳದ ತೆರಿಗೆ ಮತ್ತು ಆದಾಯ ಕುಸಿದಿರುವುದು ಹಾಗೂ ನಿರೀಕ್ಷಿಸಿದಷ್ಟು ಕೇಂದ್ರ ಸಹಾಯ ಲಭಿಸದಿರುವುದು ಕೇರಳ ಎದುರಿಸುತ್ತಿರವ ಆರ್ಥಿಕ ಒತ್ತಡ ಇನ್ನಷ್ಟು ಹೆಚ್ಚಾಗುವಂತೆ ಮಾಡತೊಡಗಿದೆ. ರಾಜ್ಯದ ಖಜಾನೆಯ ಸಂದಿಗ್ಧ ಆರ್ಥಿಕ ಸ್ಥಿತಿ ಇನ್ನೂ ಮುಂದುವರಿ ಯುತ್ತಿದೆ ಸೇರಿದಂತೆ ಹಲವು ಮಾಹಿತಿಗಳನ್ನು ಶ್ವೇತಪತ್ರಗಳಲ್ಲಿ ನೀಡಲಾಗಿದೆ.
ಸರಕಾರ ಮಂಡಿಸಿದ ಶ್ವೇತಪತ್ರದ ಬಗ್ಗೆ ವಿರೋಧಪಕ್ಷ ತೀವ್ರ ರೀತಿಯ ವಿರೋಧವ್ಯಕ್ತಪಡಿಸಿ ರಂಗಕ್ಕಿಳಿದಿದ್ದು, ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.







