ಚೆರ್ಕಳ- ಕಲ್ಲಡ್ಕ ಅಂತಾರಾಜ್ಯ ರಸ್ತೆಯ ಪಳ್ಳತ್ತಡ್ಕ ಸೇತುವೆಯಲ್ಲಿ ಬೃಹತ್ ಹೊಂಡ ಸೃಷ್ಟಿ: ಸಂಚಾರ ಭೀತಿ

ಬದಿಯಡ್ಕ: ಚೆರ್ಕಳ- ಕಲ್ಲಡ್ಕ ಅಂತಾರಾಜ್ಯ ರಸ್ತೆಯ ಪೆರ್ಲ ಬದಿಯಡ್ಕ ಪೇಟೆಯನ್ನು ಸಂಪರ್ಕಿಸುವ ಪಳ್ಳತ್ತಡ್ಕ ಸೇತುವೆಯಲ್ಲಿ ಬೃಹತ್ ಹೊಂಡ ಸೃಷ್ಟಿಯಾಗಿದೆ. ಸುಮಾರು ೧೫ ಸೆಂಟಿ ಮೀಟರ್‌ನಷ್ಟು ಆಳದ ಒಂದೂವರೆ ಮೀಟರ್ ಸುತ್ತಳತೆಯ ಹೊಂಡ ಇಲ್ಲಿ ನಿರ್ಮಾಣಗೊಂಡಿದ್ದು, ಇದು ಸೇತುವೆಯಲ್ಲಿ ಅಪಘಾತ ಸೃಷ್ಟಿಗೆ ಕಾರಣವಾಗುತ್ತಿದೆ. ಸೇತುವೆಯ ಎಡಭಾಗದಲ್ಲಿ ಈ ಹೊಂಡ ಪ್ರತ್ಯಕ್ಷವಾಗಿದ್ದು, ಈ ಸೇತುವೆಯ ಮೂಲಕ ಪ್ರತಿನಿತ್ಯ ೩೦ಕ್ಕೂ ಹೆಚ್ಚು ಬಸ್‌ಗಳು ಹಾಗೂ ಇದರ ೧೦ ಪಾಲಿಗೂ ಹೆಚ್ಚು ಇತರ ವಾಹನಗಳು ಸಂಚರಿಸುತ್ತಿವೆ. ಟೋರಸ್ ವಾಹನಗಳಲ್ಲಿ ಇತ್ತೀಚೆಗಿನಿಂದ ಅನಿಯಂತ್ರಿತವಾಗಿ ಕಗ್ಗಲ್ಲು ಸಾಗಾಟವೂ ಈ ಸೇತುವೆ ಮೂಲಕ ನಡೆಯುತ್ತಿದೆ. ಇದರಿಂದಾಗಿ ರಸ್ತೆ ಹಾಗೂ ಸೇತುವೆ ಸಂಪೂರ್ಣ ಹಾನಿಯಾಗುತ್ತಿದ್ದರೂ ಯಾವುದೇ ಕ್ರಮಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲವೆಂದು ದೂರಲಾಗಿದೆ.

ಪಳ್ಳತ್ತಡ್ಕ ಸೇತುವೆ ಈ ಮೊದಲೇ ಅಪಾಯಕರ ಸ್ಥಿತಿಗೆ ತಲುಪಿತ್ತು. ಸೇತುವೆಯ ಅಡಿಭಾಗದ ಕಾಂಕ್ರೀಟ್ ಬೀಳುತ್ತಿದ್ದು, ಕಬ್ಬಿಣ ಪ್ರತ್ಯಕ್ಷವಾಗಿದೆ. ಈ ಬಗ್ಗೆ ಸ್ಥಳೀಯರು ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ. ಈಗ ಸೇತುವೆಯ ಮೇಲ್ಭಾಗದಲ್ಲಿಯೂ ಹೊಂಡ ಸೃಷ್ಟಿಯಾಗಿದ್ದು, ಸಂಚಾರವೇ ಅಪಾಯಕರವಾಗಿದೆ ಎಂದು ಸ್ಥಳೀಯರು ತಿಳಿಸುತ್ತಾರೆ.

RELATED NEWS

You cannot copy contents of this page