ಕೈಕಂಬ- ಬಾಯಾರು ರಸ್ತೆಯಲ್ಲಿ ಅವ್ಯವಸ್ಥೆಯ ಹಲವು ಹಂಪ್‌ಗಳು ಸಂಚಾರ ಸಮಸ್ಯೆ ಬಗ್ಗೆ ಸ್ಥಳೀಯರಿಂದ ಪ್ರತಿಭಟನೆಗೆ ಸಿದ್ಧತೆ

ಉಪ್ಪಳ: ಲೋಕೋಪಯೋಗಿ ಇಲಾಖೆಯ ಕೈಕಂಬ-ಬಾಯಾರು ರಸ್ತೆಯಲ್ಲಿ ಹಲವಾರು ಹಂಪ್‌ಗಳಿದ್ದು, ಇದನ್ನು ಅವ್ಯವಸ್ಥೆ ರೀತಿಯಲ್ಲಿ ನಿರ್ಮಿಸಿದ ಕಾರಣ ಬಸ್ ಸಹಿತ ವಾಹನಗಳ ಬಿಡಿಭಾಗಗಳು ಹಾನಿಗೀಡಾಗುತ್ತಿರುವುದಾಗಿ ಮಾಲಕರು, ಸವಾರರು ದೂರಿದ್ದಾರೆ. ಅಲ್ಲದೆ ಅಪಘಾತಕ್ಕೂ ಕಾರಣವಾಗುತ್ತಿದೆ. ಇದನ್ನು ತೆರವುಗೊಳಿಸಲು ಒತ್ತಾಯಿಸಿ ಜನಪರ ಒಕ್ಕೂಟ ಬಾಯಾರು ಇದರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮೂಲಕ ಮನವಿ ನೀಡಲು ಸಿದ್ದತೆ ನಡೆಸುತ್ತಿದ್ದಾರೆ. ಈ ಹಿಂದೆ ಬಸ್ ಯೂನಿಯನ್ ವತಿಯಿಂದ ಶಾಸಕರಿಗೆ, ಲೋಕೋಪಯೋಗಿ ಇಲಾಖೆಗೆ ಮನವಿ ನೀಡಿದ್ದರು. ಆದರೆ ಇದುವರೆಗೂ ಹಂಪ್ ತೆರವುಗೊಳಿಸಲು ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಬಸ್ ಪ್ರಯಾಣಿಕರು, ವಾಹನ ಸವಾರರು ಸಹಿತ ನಾಗರಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರತಿಭಟನೆಯ ಮೊದಲ ಹಂತವಾಗಿ ಈ ರಸ್ತೆಯ ಗುತ್ತಿಗೆ ವಹಿಸಿಕೊಂಡಿರುವ ಕಂಪೆನಿಯ ಪೈವಳಿಕೆಯಲ್ಲಿರುವ ಕಚೇರಿಗೆ ಮಾರ್ಚ್ ಮೂಲಕ ಸಾಗಿ ಮನವಿ ನೀಡಲು ತಯಾರಿ ನಡೆಸುತ್ತಿರುವುದಾಗಿ ಜನಪರ ಒಕ್ಕೂಟ ಬಾಯಾರು ಇದರ ಪದಾಧಿಕಾರಿಗಳಾದ ನಾಸಿರ್ ಕೋರಿಕ್ಕಾರ್, ಮೋಣು ಪೈವಳಿಕೆ, ಸುರೇಶ್ ಮಣಿಯಾಣಿ ತಿಳಿಸಿದ್ದಾರೆ. ಕೈಕಂಬ- ಮುಳಿಗದ್ದೆ ತನಕ ಒಟ್ಟು ೧೮ ಕಿಲೋ ಮೀಟರ್ ಇದ್ದು, ೧೭ ಹಂಪ್‌ಗಳನ್ನು ನಿರ್ಮಿಸಲಾಗಿದೆ. ಮನವಿ ನೀಡಿಯೂ ಹಂಪ್ ತೆರವುಗೊಳಿಸದೆ ಇದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಕಾರವಲ್ ಪತ್ರಿಕೆಯಲ್ಲಿ ಹಲವು ಬಾರಿ ಫೊಟೋ ಸಹಿತ ವರದಿ ಪ್ರಕಟಿಸಲಾಗಿತ್ತು.

You cannot copy contents of this page