ಸಂಶಯ: ಪುತ್ರಿಯ ಕಣ್ಮುಂದೆ ಪತ್ನಿಯನ್ನು ಕಡಿದು ಕೊಂದ ಬಳಿಕ ಯುವಕ ನೇಣು

ಕೊಲ್ಲಂ: ಕುಟುಂಬ ಸಮಸ್ಯೆಗಳ ಹಿನ್ನೆಲೆಯಲ್ಲಿ ಪುತ್ರಿಯ ಕಣ್ಣಮುಂದೆಯೇ ಪತ್ನಿಯನ್ನು ಕಡಿದು ಕೊಲೆಗೈದ ಬಳಿಕ ಯುವಕ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಸಂಭವಿಸಿದೆ. ಪಟ್ಟಾಳಿ ಪಂದಪ್ಲಾವ್ ಮುರುಗನ್ ಕೋವಿಲ್ ಸಮೀಪ ನಿವಾಸಿ ಬಿನು (48), ಪತ್ನಿ ಕೃಸ್ಟಿ (38) ಎಂಬಿವರು ಮೃತಪಟ್ಟವರು. ನಿನ್ನೆ ಸಂಜೆ 5.30ಕ್ಕೆ  ಘಟನೆ ನಡೆದಿದೆ. ಸಂಶಯದ ಹೆಸರಲ್ಲಿ ಬಿನು ಪತ್ನಿಗೆ ಉಪಟಳ ನೀಡುತ್ತಿದ್ದನು.

ಈ ಹಿನ್ನೆಲೆಯಲ್ಲಿ ಕ್ರಿಸ್ಟಿ ಈತನ ವಿರುದ್ಧ ಕುನ್ನಿಕ್ಕೋಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇವರಿಬ್ಬರನ್ನು ಠಾಣೆಗೆ ಕರೆಸಿ ಸಮಸ್ಯೆ ಪರಿಹಾರಕ್ಕೆ ಯತ್ನಿಸಲಾಯಿತಾದರೂ ಆ ಕೆಲಸ ಫಲ ನೀಡಲಿಲ್ಲ. ಬಳಿಕ ಪೊಲೀಸರ ನಿರ್ದೇಶ ಪ್ರಕಾರ ಕ್ರಿಸ್ಟಿ ತನ್ನ ಸ್ವಂತ ಮನೆಗೆ ತೆರಳಿದ್ದರು. ನಿನ್ನೆ ಸಂಜೆ 5 ಗಂಟೆ ವೇಳೆಗೆ ಬಟ್ಟೆಬರೆಗಳನ್ನು ತೆಗೆದುಕೊಳ್ಳಲೆಂದು ಕ್ರಿಸ್ಟಿ ಪುತ್ರಿ ಬಿಟ್ಟಿ ಜೊತೆ ಮನೆಗೆ ತಲುಪಿದ್ದರು. ಈ ವೇಳೆ ಪತಿ ಹಾಗೂ ಪತ್ನಿ ಮಧ್ಯೆ ವಾಗ್ವಾದ ಸಂಭವಿಸಿದೆ. ರೋಷಗೊಂಡ ಬಿನು ಕತ್ತಿ ಉಪಯೋಗಿಸಿ ಕ್ರಿಸ್ಟಿಗೆ ಹಲವು ಬಾರಿ ಕಡಿದಿದ್ದಾನೆ. ಇದನ್ನು ನೋಡಿದ ಪುತ್ರಿ ಬೊಬ್ಬೆ ಹಾಕಿ ಓಡಿ ಹೋಗಿ ಪೊಲೀ ಸರಿಗೆ, ಸಂಬಂಧಿಕರಿಗೆ ಮಾಹಿತಿ ನೀಡಿದ್ದಾಳೆ. ಸ್ಥಳೀಯರು ತಲುಪಿದಾಗ ಅಡುಗೆ ಕೊಠಡಿಯಲ್ಲಿ ಬಿನು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪೊಲೀಸರು ಕೇಸು ದಾಖಲಿಸಿದ್ದಾರೆ. ದಂಪತಿಗೆ ವಿಪಿನ್ ಎಂಬ ಪುತ್ರನೂ ಇದ್ದಾನೆ.

You cannot copy contents of this page