ತೃಶೂರು ಪಟಾಕಿ ಸಂಗ್ರಹಾಲಯದಲ್ಲಿ ಭೀಕರ ಸ್ಫೋಟ: ಮೃತರ ಸಂಖ್ಯೆ 13ಕ್ಕೇರಿಕೆ

ತೃಶೂರು: ತೃಶೂರು ಪೂರಂ ಗಾಗಿ ಕುಂಡತ್ತಿಕ್ಕಾಡ್‌ನ ಪಟಾಕಿ  ಸಂಗ್ರಹಾಲಯದಲ್ಲಿ ನಿನ್ನೆ ಉಂಟಾದ ಭೀಕರ ಸ್ಫೋಟದಲ್ಲಿ 13 ಮಂದಿ ಪ್ರಾಣ ಕಳೆದುಕೊಂಡು ಹಲವರು ಗಂಭೀರ ಗಾಯಗೊಂಡ ದುರ್ಘಟನೆ ಬಗ್ಗೆ ಸಮಗ್ರ ನ್ಯಾಯಾಂಗ ತನಿಖೆ ನಡೆಸಲು ಇಂದು ಬೆಳಿಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ತುರ್ತು ಸಭೆ ತೀರ್ಮಾನಿಸಿದೆ. ಮಾತ್ರವಲ್ಲ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿರುವ ದುರ್ದೈವಿಗಳ ಆಶ್ರಿತರಿಗೆ ತಲಾ ೧೪ ಲಕ್ಷ ರೂ.ನಂತೆ ನಷ್ಟ ಪರಿಹಾರವನ್ನೂ ಸರಕಾರ ಘೋಷಿಸಿದೆ. ಇನ್ನೊಂದೆಡೆ ಈ ಘಟನೆ ಬಗ್ಗೆ ಕೇಂದ್ರ ತನಿಖಾ ತಂಡ ಸಮಗ್ರ ತನಿಖೆ ನಡೆಸಲಿದೆಯೆಂದು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಿದ ತೃಶೂರು ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಕೇಂದ್ರ ಸಚಿವ ಸುರೇಶ್ ಗೋಪಿ  ತಿಳಿಸಿದ್ದಾರೆ. ಈ ದುರಂತ ದಲ್ಲಿ ಪ್ರಾಣ ಕಳೆದುಕೊಂಡವರ ಪೈಕಿ ಮೂವರನ್ನು ಮಾತ್ರವೇ ಗುರುತುಹ ಚ್ಚಲು ಈತನಕ ಸಾಧ್ಯವಾಗಿದೆ.  ಪಳಯನ್ನೂರಿನ ಸುದರ್ಶನ್ (54), ಕುಂಡನ್ನೂರಿನ ಸುಬಿನ್ (40) ಮತ್ತು ಕುಮರನಲ್ಲೂರಿನ ವಾಸುದೇವನ್ (54) ಎಂದು ಇವರ ಗುರುತು ಹಚ್ಚಲಾಗಿದೆ. ಗುರುತುಹಚ್ಚಲು ಸಾಧ್ಯವಾಗದ  ಮೃತದೇಹಗಳನ್ನು ತುರ್ತಾಗಿ ಡಿಎನ್‌ಎ ಪರೀಕ್ಷೆಗೊಳಪಡಿಸುವ ಕ್ರಮವನ್ನೂ ಆರಂಭಿಸಲಾಗಿದೆ.  ದುರಂತದ ವೇಳೆ ಅಲ್ಲಿ ಎಷ್ಟು ಮಂದಿ ಇದ್ದರೆಂಬ ನಿಖರ ಮಾಹಿತಿ ಪೊಲೀಸರಿಗೆ ಇನ್ನೂ ಲಭಿಸಿಲ್ಲ. ಈ ದುರ್ಘಟನೆ ಬಗ್ಗೆ ಪ್ರಧಾನಿ ನರೇಂದ್ರಮೋದಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ತುರ್ತಾಗಿ ತಲಾ 2 ಲಕ್ಷ ರೂ. ನಷ್ಟ ಪರಿಹಾರ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ.ನಂತೆ ಘೋಷಿಸಿದ್ದಾರೆ. ನಿನ್ನೆ ಅಪರಾಹ್ನ 3.30ರ ವೇಳೆ ಈ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟದ ನಿಖರ ಕಾರಣದ ಬಗ್ಗೆಯೂ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.

You cannot copy contents of this page