ನಜೀಬ್ ಕಲ್ಲಟ್ರನ ಮೊಬೈಲ್ ಫೋನ್, ಪಾಸ್‌ಪೋರ್ಟ್ ವಶ; ತನಿಖಾ ತಂಡ ಶೀಘ್ರಕಾಸರಗೋಡಿಗೆ

ಕೊಚ್ಚಿ: ಎರ್ನಾಕುಳಂ ಕೇಂದ್ರೀಕರಿಸಿ ನಡೆದ ಅವಯವ ವಂಚನೆ ಪ್ರಕರಣದ ತನಿಖೆಯನ್ನು ತನಿಖಾ ತಂಡ ಇನ್ನಷ್ಟು ತೀವ್ರಗೊಳಿಸಿದೆ. ತನಿಖೆಯಂಗವಾಗಿ ಪ್ರಕರಣದ ಸೂತ್ರಧಾರನಾದ ಕಾಸರಗೋಡು ಕಳನಾಡು ಚಳಿಯಂಗೋಡ್‌ನ ಮುಹಮ್ಮದ್ ನಜೀಬ್ ಕಲ್ಲಟ್ರ (53)ನ ಪಾಸ್‌ಪೋರ್ಟ್ ಹಾಗೂ ಮೊಬೈಲ್ ಫೋನ್‌ನ್ನು ತನಿಖಾ ತಂಡ ವಶಕ್ಕೆ ತೆಗೆದುಕೊಂಡಿದೆ. ಮೊಬೈಲ್ ಫೋನ್ ಪರಿಶೀಲಿಸಿದರೆ ಈತನೊಂದಿಗೆ ನಂಟು ಹೊಂದಿದವರನ್ನು ಪತ್ತೆಹಚ್ಚಲು ಸಾಧ್ಯವಾಗಲಿದೆಯೆಂದು ತನಿಖಾ ತಂಡ ನಿರೀಕ್ಷೆ ಇರಿಸಿದೆ.  ಮೊಹಮ್ಮದ್ ನಜೀಬ್ ಕಲ್ಲಟ್ರನ ನೇತೃತ್ವದಲ್ಲಿ ಕೋಟ್ಯಂತರ ರೂಪಾಯಿಗಳ ವಂಚನೆ ನಡೆದಿದೆ ಯೆಂದೂ ವಂಚನೆಗೆ ಅಂತಾರಾಷ್ಟ್ರ ಮಟ್ಟದಲ್ಲಿ ಸಂಬಂಧವಿ ರುವುದಾಗಿ ಸಂಶಯಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಬಡವರನ್ನು ಬಲೆಯಲ್ಲಿ ಸಿಲುಕಿಸಿ 10 ಲಕ್ಷ ರೂಪಾಯಿಗಿಂತ ಕಡಿಮೆ ಮೊತ್ತ ನೀಡಿ  ಕೋಟ್ಯಂತರ ರೂಪಾಯಿ ಪಡೆದುಕೊಂಡ ಬಳಿಕ  ಕಿಡ್ನಿ ಸಹಿತ  ಅವಯವಗಳನ್ನು ವಿದೇಶಿಗಳ ಸಹಿತ  ಹಲವರಿಗೆ ನೀಡಿರುವುದಾಗಿಯೂ ಸಂಶಯಿಸಲಾಗುತ್ತಿದೆ.  ಅವಯವ ಹಸ್ತಾಂತರದ ಹಲವು ದಾಖಲೆಪತ್ರ ಗಳನ್ನು ಸಿದ್ಧಪಡಿಸಿರುವುದು ಕಾಸರಗೋಡಿನಲ್ಲಾಗಿದೆಯೆಂಬ ಸೂಚನೆಯೂ ತನಿಖಾ ತಂಡಕ್ಕೆ ಲಭಿಸಿದೆ. ಇದರ ಆಧಾರದಲ್ಲಿ ಎರ್ನಾಕುಳಂ ರೂರಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ನೇತೃತ್ವದಲ್ಲಿರುವ ಪ್ರತ್ಯೇಕ ತನಿಖಾ ತಂಡ ಶೀಘ್ರವೇ ಕಾಸರಗೋಡಿಗೆ ತಲುಪಿ ತನಿಖೆ ನಡೆಸಲಿದೆಯೆಂದು ಹೇಳಲಾಗುತ್ತಿದೆ.

ತನಿಖೆಯಂಗವಾಗಿ  ನಜೀಬ್‌ನ ಪತ್ನಿ ಕುನ್ನತ್ತುನಾಡು ಪೆರಿಂಙಾಲ ಬೈತುಲ್ ರಹ್ಮಾ ವೀಟಿಲ್‌ನ ರಶೀದಳನ್ನು ಕುನ್ನತ್ತುನಾಡು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು. ಅಲ್ಲದೆ ಕುನ್ನತ್ತುನಾಡು ಕುಮಾರಪುರದ ಸನ್ನಿ ವರ್ಗೀಸ್, ಆತನ ಪತ್ನಿ ಸಿನಿ ವರ್ಗೀಸ್, ಚೇಲಪ್ಪುಳಂ ಕವುಂಙಪ್ಪಾರದ  ಸನೋಜ್, ರೀಜಾ, ಸುಧೀರ್, ವಿನೋದ್ ಎಂಬಿವರನ್ನು ಅನಂತರ ಸೆರೆಹಿಡಿಯಲಾಗಿದೆ. ಈ ದಂಧೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾ ರೆಯೇ ಎಂದು ಸಮಗ್ರ ತನಿಖೆಯಿಂದ ತಿಳಿದುಬರಲಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

You cannot copy contents of this page