ಅಕ್ರಮ ಹಣ ವರ್ಗಾವಣೆ ಪ್ರಕರಣ: ಪಿಣರಾಯಿ ವಿಜಯನ್,ಅಳಿಯನ ನಿವಾಸಗಳು ಸಹಿತ 10 ಸ್ಥಳಗಳಲ್ಲಿ ಇ.ಡಿ ಶೋಧ; ರಾಜ್ಯಾದ್ಯಂತ ಪ್ರತಿಭಟನೆಗಳೊಂದಿಗೆ ಬೀದಿಗಿಳಿದ ಸಿಪಿಎಂ

ತಿರುವನಂತಪುರ: ವಿವಾದಿತ ಗಣಿ ಕಂಪೆನಿ  ಕೊಚ್ಚಿನ್ ಮಿನರಲ್ಸ್ ಆಂಡ್ ರೂಟೈಲ್ಸ್ ಲಿಮಿಟೆಡ್  (ಸಿ.ಎಂ.ಆರ್.ಎಲ್) ಹಾಗೂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಪುತ್ರಿ ವೀಣಾ  ವಿಜ ಯನ್ ಅವರ ಬೆಂಗಳೂರು  ಮೂಲದ ಐ.ಟಿ ಸಂಸ್ಥೆ ಎಕ್ಸಾಲಾಜಿಕ್ ಸೊಲ್ಯೂಶನ್ ನಡುವೆ ನಡೆದಿದೆ ಎನ್ನಲಾದ 1.72 ಕೋಟಿ ರೂ.ಗಳ  ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಇ.ಡಿ  (ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್) ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಅಳಿಯ ಮಾಜಿ ಸಚಿವ ಮೊಹಮ್ಮದ್ ರಿಯಾಸ್‌ರ ನಿವಾಸಗಳೂ ಸೇರಿದಂತೆ ೧೦ ಸ್ಥಳಗಳಲ್ಲಿ ಇಂದು ಬೆಳಿಗ್ಗಿನಿಂದ ಏಕ ಕಾಲದಲ್ಲಿ ದಾಳಿ ಮತ್ತು ತಪಾಸಣೆ  ಆರಂಭಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಸೆಕ್ಷನ್  ಅಡಿಯಲ್ಲಿ ಈ ದಾಳಿ ನಡೆಸಲಾಗುತ್ತಿದೆ.  ಪಿಣರಾಯಿ ವಿಜಯನ್‌ರ ತಿರುವನಂತಪುರದಲ್ಲಿರುವ ಬಾಡಿಗೆ ಮನೆ ಮತ್ತು ಕಣ್ಣೂರಿನಲ್ಲಿರುವ ಅವರ ನಿವಾಸ, ಅವರ ಅಳಿಯ  ಮಾಜಿ ಸಚಿವ ಮೊಹಮ್ಮದ್ ರಿಯಾಸ್‌ರ ಕಲ್ಲಿಕೋಟೆಯಲ್ಲಿರುವ ಮನೆ, ಸಿ.ಎಂ.ಆರ್.ಎಲ್ ಕಚೇರಿ, ಅದರ ಆಡಳಿತ ನಿರ್ದೇಶಕ  ಶಶೀಂದ್ರನ್ ಕರ್ತಾ ಸೇರಿದಂತೆ ೧೦ ಸ್ಥಳಗಳಲ್ಲಿ ಇ.ಡಿ ಏಕಕಾಲದಲ್ಲಿ ತಪಾಸಣೆ  ನಡೆಸುತ್ತಿದೆ.

ಕೇಂದ್ರ ಪಡೆಯ ಬಿಗಿ ಭದ್ರತೆ ಯೊಂದಿಗೆ ಈ ದಾಳಿ ನಡೆಯುತ್ತಿದೆ. ಸಿ.ಎಂ.ಆರ್.ಎಲ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ   ತನಿಖೆ ಮುಂದುವರಿಸುವಂತೆ ಕೇರಳ ಹೈಕೋರ್ಟ್‌ನ ಏಕ ಸದಸ್ಯ ಪೀಠ ನಿನ್ನೆ ನಿರ್ದೇಶ ನೀಡಿತ್ತು. ಈ ಪ್ರಕರಣದ ತನಿಖೆ ತಡೆಯುವಂತೆ ಕೋರಿ ಸಿಎಂಆರ್‌ಎಲ್‌ನ ಆಡಳಿತ ನಿರ್ದೇಶಕ ಶಶೀಂದ್ರನ್ ಕರ್ತಾ, ಆ ಸಂಸ್ಥೆಯ ಮುಖ್ಯ ಆರ್ಥಿಕ ಅಧಿಕಾರಿ ಕೆ.ಎಸ್. ಸುರೇಶ್ ಕುಮಾರ್ ಸೇರಿದಂತೆ  ಇತರ ಸಿಬ್ಬಂದಿಗಳು ಹೈಕೋರ್ಟ್‌ಗೆ ಅರ್ಜಿ  ಸಲ್ಲಿಸಿದ್ದರು. ಆದರೆ ಅವರ ಬೇಡಿಕೆಯನ್ನು ಅಂಗೀಕರಿಸದ ಹೈಕೋರ್ಟ್ ತನಿಖೆ ಮುಂದುವರಿಸುವಂತೆ ಇ.ಡಿಗೆ ನಿರ್ದೇಶ ನೀಡಿತ್ತು. ಅದರ ಬೆನ್ನಲ್ಲೇ ಇ.ಡಿ ಇಂದು ಬೆಳಿಗ್ಗಿನಿಂದ ಈ ದಾಳಿ ಮತ್ತು ತಪಾಸಣೆ ಆರಂಭಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಎಕ್ಸಾಲಾಜಿಕಲ್ ಸೊಲ್ಯೂಶನ್ ಐ.ಟಿ ಸಂಸ್ಥೆ ಮಾಲಕಿ    ವೀಣಾ ವಿಜಯನ್‌ರ ಹೇಳಿಕೆಯನ್ನು ಇಡಿ ಇದೇ ಸಂದರ್ಭದಲ್ಲಿ ದಾಖಲಿಸಿಕೊಂಡಿದೆ. ಈ ದಾಳಿಯಲ್ಲಿ  ಪತ್ತೆಯಾದ ದಾಖಲುಪತ್ರ ಗಳು ಮತ್ತು ಇತರ ಮಾಹಿತಿಗಳ ಬಗ್ಗೆ  ಇ.ಡಿ ಅಧಿಕಾರಿಗಳು ಈತನಕ ಯಾವುದೇ  ಬಹಿರಂಗ ಹೇಳಿಕೆ ನೀಡಿಲ್ಲ.  ಪಿಣರಾಯಿ ವಿಜಯನ್‌ರ  ನಿವಾಸಕ್ಕೆ ಇ.ಡಿ ದಾಳಿ ಆರಂಭಿಸಿರುವಂತೆ ಅದನ್ನು ಪ್ರತಿಭಟಿಸಿ ಸಿಪಿಎಂ ಕಾರ್ಯಕರ್ತರು ಕಣ್ಣೂರು, ತಿರುವನಂತಪುರ ಸೇರಿದಂತೆ ಹಲವೆಡೆಗಳಲ್ಲಿ  ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ.  ಅಕ್ರಮ ಹಣ ವರ್ಗಾವಣೆ ಎಂಬುವುದು  ರಾಜಕೀಯ ಹಗೆತನದ ಆಧಾರದಲ್ಲಿ ದಾಖಲಿಸಲಾಗಿರುವ ಒಂದು ಹುಸಿ ಪ್ರಕರಣವಾಗಿದೆ.  ಬಿಜೆಪಿ ಮತ್ತು ಯುಡಿಎಫ್ ಸೇರಿ ಪಿಣರಾಯಿ  ವಿಜಯನ್ ಮತ್ತು ಸಿಪಿಎಂನ್ನು ದಮನಗೊಳಿಸಲು ನಡೆಸುತ್ತಿರುವ ಯತ್ನ ಇದಾಗಿದೆಯೆಂದೂ ಆದರೆ ಅದು ಸಫಲವಾಗದೆಂದು ಸಿಪಿಎಂ ನೇತಾರರು ಹೇಳಿದ್ದಾರೆ.

You cannot copy contents of this page