ಕೊಚ್ಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎನ್‌ಫೋರ್ಸ್‌ಮೆಂಟ್ ತನಿಖೆ ಮುಂದುವರಿಸಬಹುದೆಂದು ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ನೀಡಿದೆ. ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅಪೀಲು ಸಲ್ಲಿಸಲು ಎರಡು ವಾರಗಳ ಸಮಯ ನೀಡಬೇಕೆಂಬ ಸಿಎಂಆರ್‌ಎಲ್ ಕಂಪೆನಿಯ ನ್ಯಾಯವಾದಿಯ ಬೇಡಿಕೆಯನ್ನೂ ಹೈಕೋರ್ಟ್ ತಿರಸ್ಕರಿಸಿದೆ. ಈ ತೀರ್ಪಿನೊಂದಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣ ರಾಜ್ಯದ ರಾಜಕೀಯದಲ್ಲಿ ಮತ್ತೆ ಚರ್ಚೆಯಾಗಲಿದೆ. ಇ.ಡಿ ತನಿಖೆ ನಡೆಸಬಹುದೆಂದು ಹೈಕೋರ್ಟ್‌ನ ಏಕ ಸದಸ್ಯ ಪೀಠ ಈ ಮೊದಲು ತೀರ್ಪು ನೀಡಿತ್ತು. ಇದರ ಆಧಾರದಲ್ಲಿ ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ತಿರುವನಂ ತಪುರ ಹಾಗೂ ಕಣ್ಣೂರಿನಲ್ಲಿರುವ ಮನೆಗಳ ಸಹಿತ 12 ಕಡೆಗಳಲ್ಲಿ ಇ.ಡಿ ದಾಳಿ ನಡೆಸಿತ್ತು. ಇದು ಭಾರೀ ರಾಜಕೀಯ ಚರ್ಚೆಗಳಿಗೆ ಕಾರಣ ವಾಗಿತ್ತು. ದಾಳಿಯ ಬೆನ್ನಲ್ಲೇ ಸಿಎಂಆರ್‌ಎಲ್ ಕಂಪನಿ ಇಡಿ ತನಿಖೆಯನ್ನು ತಡೆಯಬೇಕೆಂದು ಒತ್ತಾಯಿಸಿ ಹೈಕೋರ್ಟ್‌ನ ವಿಭಾಗೀ ಯ ಪೀಠವನ್ನು ಸಮೀಪಿಸಿತ್ತು.
ಇದೇ ವೇಳೆ ಇ.ಡಿ ಮುಖ್ಯಸ್ಥ ರಾಹುಲ್ ನವೀನ್ ಇಂದು ಬೆಳಿಗ್ಗೆ ಕೊಚ್ಚಿಗೆ ತಲುಪಿದ್ದಾರೆ. ಇಲ್ಲಿ ಇವರು ನಿರ್ಣಾಯಕ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಪುತ್ರಿ ವೀಣಾ ಸಹಿತ ಇತರರ ವಿರುದ್ಧ ಮುಂದಿನ ತನಿಖೆ ಯಾವ ರೀತಿಯಲ್ಲಿ ಮುಂದುವರಿಸಬಹುದೆಂಬ ಬಗ್ಗೆ ನಿರ್ಧರಿಸಲಾಗುವುದು. ಪಿಣರಾಯಿ ವಿಜಯನ್‌ರ ಮನೆಯಲ್ಲಿ ತಪಾಸಣೆಗಾಗಿ ತಲುಪಿದ ಇ.ಡಿ ಅಧಿಕಾರಿಗಳ ಮೇಲೆ ನಡೆದ ದಾಳಿ ಘಟನೆ ಕೂಡಾ ಸಭೆಯಲ್ಲಿ ಚರ್ಚೆಯಾಗಲಿದೆಯೆಂದು ಸೂಚನೆಯಿದೆ.







