ನಾಡೋಜ ಕಯ್ಯಾರ ಕಿಂಞಣ್ಣರೈ ಜನ್ಮದಿನಾಚರಣೆ, ಪ್ರಶಸ್ತಿ ಪ್ರದಾನ 21ರಂದು

ಪೈವಳಿಕೆ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಸಹಯೋಗದಲ್ಲಿ ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈ ಜನ್ಮ ದಿನಾಚರಣೆ, ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಈ ತಿಂಗಳ 21ರಂದು ಬೆಳಿಗ್ಗೆ ೯ರಿಂದ ಕಯ್ಯಾರು ಕೊಕ್ಕಚಾಲು ಕಾಮಿಲ್ ಶಾಲಾ ವಠಾರ ದಲ್ಲಿ ನಡೆಯಲಿದೆ. ಇದೇ ವೇಳೆ ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಟಿಎಸ್ ಆಡಳಿತ ನಿರ್ದೇಶಕ ಡಾ. ಮೂಡಂ ಬೈಲು ರವಿ ಶೆಟ್ಟಿ ದೋಣಿಂಜೆಗುತ್ತು ಇವರಿಗೆ ಕಯ್ಯಾರ ಪ್ರಶಸ್ತಿ,  ನಾಡಿನ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ.

ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಉದ್ಘಾಟಿಸು ವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸುವರು.  ಶಾಸಕ ಎಕೆಎಂ ಅಶ್ರಫ್ ಪ್ರಶಸ್ತಿ ಪ್ರದಾನ ಮಾಡುವರು. ಶಿವಾನಂದ ಕೋಟ್ಯಾನ್ ಕಟಪಾಡಿ ಇವರು ರಚಿಸಿದ ‘ಪರಂಪರೆಯ ಪಯಣ’ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಬಿಡುಗಡೆಗೊಳಿಸುವರು. ಡಾ. ಪ್ರಸನ್ನ ರೈ ಕಲ್ಲಕಳಿಯ ಇವರು ಕಯ್ಯಾರರ ಹಾಡುಗಳ ಗಾಯನ ನಡೆಸುವರು. ಧರ್ಮಗುರು ರೆ.ಫಾ. ವಿಶಾಲ್ ಮೋನಿಶ್, ಪೈವಳಿಕೆ ಪಂ. ಅಧ್ಯಕ್ಷೆ ಬದರುನ್ನಿಸ ಸಲೀಂ, ಸೋಮಶೇಖರ ಜೆ.ಎಸ್, ಮೋಹನ್ ರೈ, ಚಂದ್ರಾವತಿ ಶೆಟ್ಟಿ, ಸುನೀನ ಝಡ್ ಎ ಕಯ್ಯಾರು, ಪ್ರಿನ್ಸಿ ಡಿಸೋಜ, ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅತಿಥಿಗಳಾಗಿ ಭಾಗವಹಿಸುವರು.

ಸಾಮಾಜಿಕ ಕಾರ್ಯಕರ್ತ ದೀಪಕ್ ವಿ.ಕೆ, ಜಾನಪದ ಕಲಾವಿದ ಸೋಮಯ್ಯ ಅಶ್ವತ್ಥಕಟ್ಟೆ, ಪ್ರಗತಿಪರ ಕೃಷಿಕ ರಾಮಣ್ಣ ಅತ್ತಾರ್, ನಾಟಿ ವೈದ್ಯ ಮೊಹಮ್ಮದ್ ಪರಂಬಳ ಇವರಿಗೆ ಗೌರವಾರ್ಪಣೆ ನಡೆಯಲಿದೆ. ಕೆಯುಡಬ್ಲ್ಯುಜೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶ್ರೀಧರ ಹೊಳ್ಳ ಸಹಿತ ಹಲವರು ಉಪಸ್ಥಿತರಿರುವರು.

ನಾಡಗೀತೆ, ಕನ್ನಡ ಗೀತೆಗಳ ಗಾಯನ, ಸಮೂಹ ಶಾಸ್ತ್ರೀಯ ಭರತನಾಟ್ಯ, ಕಥಕ್ ನೃತ್ಯ, ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯ ಪ್ರದರ್ಶನಗೊಳ್ಳಲಿದೆ. ಗ್ರೀನ್ ಸ್ಟಾರ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಕಯ್ಯಾರು, ಕೊಕ್ಕಚಾಲ್ ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್, ಫ್ರೆಂಡ್ಸ್ ಕಯ್ಯಾರು, ಮುಂಡತ್ತಾಯ ಯುವಕವೃಂದ ಕಯ್ಯಾರು, ಲಿಟ್ಲ್ ಬ್ರದರ್ಸ್ ಕೊಕ್ಕಚಾಲ್, ನೇತಾಜಿ ಫ್ರೆಂಡ್ಸ್ ಅಶ್ವತ್ಥಕಟ್ಟೆ, ಕುಟುಂಬಶ್ರೀ ಘಟಕಗಳು ಸಹಕಾರ ನೀಡಲಿವೆ.

RELATED NEWS

You cannot copy contents of this page