ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ: ಮನೆ ಕೆಡಹಲು ಬಂದ ಅಧಿಕಾರಿಗಳ ಮುಂದೆ ಆತ್ಮಹತ್ಯೆ ಬೆದರಿಕೆಯೊಡ್ಡಿದ ಕುಟುಂಬ, ಸೃಷ್ಟಿಯಾದ ಸಂಘರ್ಷ ವಾತಾವರಣ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಾಗಿ ಭೂಸ್ವಾಧೀನಗೊಳಿಸುವ ಕ್ರಮದಂತೆ ಮನೆಯನ್ನು ಕೆಡಹಲು ಬಂದ ಅಧಿಕಾರಿಗಳ ಮುಂದೆ  ಆ ಮನೆಯವರು ಆತ್ಮಹತ್ಯಾಬೆದರಿಕೆಯೊಡ್ಡಿದ  ಅದು ಅಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಸಿದ ಘಟನೆ  ಚೆರ್ಕಳ ಸಮೀಪದ ಬೇವಿಂಜೆಯಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಂತೆ ಬೇವಿಂಜೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಎಂ.ಟಿ. ಅಬ್ದುಲ್ ಬಶೀರ್ ಎಂಬವರ ದ್ವಿ ಅಂತಸ್ತು ಮನೆಯ ಎದುರುಗಡೆ ಭಾಗವನ್ನು ಕೆಡಹಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಧಿಕಾರಿಗಳ ತಂಡ ನಿನ್ನೆ ಆ ಮನೆಗೆ ಬಂದಿತ್ತು. ಪ್ರಸ್ತುತ ಯೋಜನೆ ಪ್ರಕಾರ ಮನೆಯ ಎದುರುಭಾಗವನ್ನು ಕೆಡಹಬೇಕಾಗಿತ್ತು.  ಮನೆಯ ಒಂದು ಭಾಗವನ್ನು ಕೆಡಹಿದಲ್ಲಿ ಅದು ನಂತರ ವಾಸಯೋಗ್ಯವಲ್ಲದಂತಾಗಲಿದೆಯೆಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಮತ್ತು  ಸಂಬಂಧಪಟ್ಟ ಇತರ ಅಧಿಕಾರಿಗಳು ತಹಶೀಲ್ದಾರ್‌ಗೆ ಈ ಹಿಂದೆ ವರದಿ ಸಲ್ಲಿಸಿದ್ದರು. ಮಾತ್ರವಲ್ಲ  ಆ ಮನೆಯ ಎದುರು ಭಾಗ ಕೆಡಹಿದಲ್ಲಿ ಅದಕ್ಕೆ ಸೂಕ್ತ ನಷ್ಟಪರಿಹಾರವನ್ನು ನೀಡಬೇಕೆಂದು ವರದಿಯಲ್ಲಿ ತಿಳಿಸಲಾಗಿತ್ತು. ಅದರಂತೆ ನಷ್ಟ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ನಿರ್ದೇಶ ನೀಡಿದ್ದರೂ ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರ ಅದನ್ನು  ಅಂಗೀಕರಿಸಿರಲಿಲ್ಲ. ಈ ಮನೆಯ ಸುತ್ತು ಗೋಡೆಯನ್ನು ಕೆಡಹಲು ಆರು ತಿಂಗಳ ಹಿಂದೆ ಅಧಿಕಾರಿಗಳ ತಂಡ ಅಲ್ಲಿಗೆ ಬಂದಿತ್ತು. ಆಗ ಆ ತಂಡವನ್ನು ಜನಪ್ರತಿನಿಧಿಗಳು ಮತ್ತಿತರರು ಸೇರಿ ಅಂದು ತಡೆದಿದ್ದರು. ಅದಕ್ಕೆ ಸಂಬಂಧಿಸಿ ಜನಪ್ರತಿನಿಧಿಗಳು ಮತ್ತು ಇತರರ ವಿರುದ್ದ ಪೊಲೀಸರು  ಕೇಸು ದಾಖಲಿಸಿಕೊಂಡಿದ್ದರು. ಮನೆಯ ಒಂದು ಭಾಗವನ್ನು ಕೆಡಹುವ ಪ್ರಯತ್ನಕ್ಕೆ ಮನೆಯವರು ಹೈಕೋರ್ಟ್‌ನಿಂದ ತಡೆಯಾಜ್ಞೆ ಪಡೆದಿದ್ದರು. ಅದರ ಅವಧಿ ನಿನ್ನೆ ಕೊನೆಗೊಂಡಿತ್ತು. ಅದರಂತೆ ವಿದ್ಯಾನಗರ ಪೊಲೀಸರ ಸಹಾಯದೊಂದಿಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ತಂಡ ನಿನ್ನೆ ಆ ಮನೆಗೆ ಬಂದಾಗ ಮನೆಯ ಸದಸ್ಯರು ಅಡುಗೆ ಅನಿಲ ಸಿಲಿಂಡರ್ ಮತ್ತು ಪೆಟ್ರೋಲ್ ತುಂಬಿಸಿದ ಬಾಟಲಿಗಳೊಂದಿಗೆ ಬಂದು ಸಾಮೂಹಿಕವಾಗಿ ಆತ್ಮಹತ್ಯೆಗೈಯ್ಯುವ ಬೆದರಿಕೆಯೊಡ್ಡಿದರು. ಆಗ ಅಲ್ಲಿ ಊರವರು ಜಮಾಯಿಸಿದಾಗ ಸಂಘರ್ಷದ ವಾತಾವರಣ ನಿರ್ಮಾಣವಾಯಿತು.  ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳತೊಡಗಿದಾಗ ಅಧಿಕಾರಿಗಳ ತಂಡ  ಮನೆ ಕೆಡಹುವ ಯತ್ನದಿಂದ ಕೊನೆಗೆ ಹಿಂದಕ್ಕೆ ಸರಿದರು. ಆ ವೇಳೆ ಶಾಸಕ ಎನ್.ಎ  ನೆಲ್ಲಿಕುನ್ನು ಸೇರಿದಂತೆ ಇತರ ಹಲವು ಜನಪ್ರತಿನಿಧಿಗಳು ಅಲ್ಲಿಗೆ ಆಗಮಿಸಿ ಚರ್ಚೆ ನಡೆಸಿದ ಬಳಿಕ ತಮ್ಮ ಪ್ರತಿಭಟನೆ ನಿಲ್ಲಿಸಿದರು. ಈ ಬಗ್ಗೆ ಕಲೆಕ್ಟರೇಟ್‌ನಲ್ಲಿ ಇಂದು ಚರ್ಚೆ ನಡೆಯಲಿದೆ.

You cannot copy contents of this page