ಕಾಸರಗೋಡು: ಸಾವಿರಾರು ಮಂದಿ ದಿನಂಪ್ರತಿ ಚಿಕಿತ್ಸೆಗಾಗಿ ತಲುಪುವ ಕಾಸರಗೋಡು ಜನರಲ್ ಆಸ್ಪತ್ರೆಯ ಎಂಟು ಮಹಡಿಯ ಆಸ್ಪತ್ರೆ ಕಟ್ಟಡ ನಿರ್ಮಾಣ ಪೂರ್ತಿಗೊಂಡು ಏಳು ವರ್ಷ ಕಳೆದರೂ ಪೂರ್ತಿಯಾಗದೆ ಆಮೆಗತಿಯಲ್ಲಿ ಸಾಗುತ್ತಿದೆ. ಆರೋಗ್ಯ ರಂಗದಲ್ಲಿ ಜಿಲ್ಲೆ ಎದುರಿಸುತ್ತಿರುವ ಹಿಂದುಳಿದಾವಸ್ಥೆ ಮಧ್ಯೆ ಕಟ್ಟಡ ನಿರ್ಮಾಣದ ವಿಳಂಬ ಇನ್ನಷ್ಟು ಸಮಸ್ಯೆ ಸೃಷ್ಟಿಸುತ್ತಿದೆ ಎಂದು ವಿವರಿಸಿ ನೂತನ ಆರೋಗ್ಯ ಸಚಿವ ಕೆ. ಮುರಳೀಧರನ್‌ರಿಗೆ ಸೇವಾದಳ ರಾಜ್ಯಾಧ್ಯಕ್ಷ ರಮೇಶನ್ ಕರುವಾಚೇರಿ ಮನವಿ ನೀಡಿದ್ದಾರೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಕಟ್ಟಡದ ವಾಟರ್ ಟ್ಯಾಂಕ್ ನಿರ್ಮಾಣ, ವಿದ್ಯುತ್ತೀಕರಣ, ಪ್ಲಂಬಿಂಗ್ ಕಾಮಗಾರಿ ಗಳು ಇನ್ನೂ ಕೂಡಾ ನಡೆಸಲಾಗಿಲ್ಲ. ಆರಂಭದಲ್ಲಿ ನಬಾರ್ಡ್ ಫಂಡ್ ಉಪಯೋಗಿಸಿ ನಿರ್ಮಿಸಿದ ಈ ಕಟ್ಟಡಕ್ಕೆ ಪ್ರಸ್ತುತ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ ಮೊತ್ತ ಮಂಜೂರುಗೊಳಿಸಿ ಕಾಮಗಾರಿ ಮುಂದುವರಿಸಲಾಗುತ್ತಿದೆ. ಮಳೆ ಆರಂಭದೊಂದಿಗೆ ಮಳೆಗಾಲ ರೋಗಗಳು, ಜ್ವರ ಸಹಿತ ಸಾಂಕ್ರಾಮಿಕ ರೋಗಗಳು ಹರಡಲು ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ರೋಗಿಗಳು ಸೌಕರ್ಯದ ಕೊರತೆ ಅನುಭವಿಸುತ್ತಿದ್ದು, ಈ ಬಗ್ಗೆ ಮಾಧ್ಯಮಗಳು ಹಲವು ಬಾರಿ ಸರಕಾರದ ಗಮನ ಸೆಳೆದಿವೆ.ಈ ಕಟ್ಟಡವನ್ನು ಶೀಘ್ರವೇ ಪೂರ್ತಿಗೊಳಿಸಿ ಉದ್ಘಾಟನೆ ನಡೆಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿ ರುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.







