ಕಾಸರಗೋಡು: ಪುತ್ತೂರು ಬಳಿಯ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕಾಣಿಕೆ ಡಬ್ಬಿ ಕಳವುಗೈದ ಪ್ರಕರಣದಲ್ಲಿ ಬದಿಯಡ್ಕ ನಿವಾಸಿಯನ್ನು ಪುತ್ತೂರು ರೂರಲ್ ಪೊಲೀಸರು ಬಂಧಿಸಿದ್ದಾರೆ. ಬದಿಯಡ್ಕದ ಕೆ. ಸತೀಶ್ (31) ಸೆರೆಯಾದ ವ್ಯಕ್ತಿ. ಆಗಸ್ಟ್ ೨೫ರಂದು ಬೆಳಿಗ್ಗೆ ಕ್ಷೇತ್ರದ ಹೊರಗೆ ಇರಿಸಲಾಗಿದ್ದ ಕಾಣಿಕೆ ಡಬ್ಬಿ ನಾಪತ್ತೆ ಯಾಗಿತ್ತು. ಕ್ಷೇತ್ರದ ನೌಕರರ ಗಮನಕ್ಕೆ ಇದು ಬಂದಿದ್ದು, ಆ ಬಳಿಕ ನಡೆಸಿದ ಹುಡುಕಾಟದಲ್ಲಿ ಕಾಣಿಕೆ ಡಬ್ಬಿಯನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.
ದೇವಸ್ಥಾನದ ಅಧಿಕಾರಿಗಳು ಸಿಸಿ ಟಿವಿ ದೃಶಗಳನ್ನು ಪರಿಶೀಲಿಸಿದಾಗ 24ರಂದು ರಾತ್ರಿ ಅಪರಿಚಿತ ವ್ಯಕ್ತಿ ಈ ಕಾಣಿಕೆ ಡಬ್ಬಿಯನ್ನು ತೆಗೆದುಕೊಂಡು ಪರಾರಿಯಾಗುತ್ತಿರುವುದು ಪತ್ತೆಹಚ್ಚಲಾಗಿತ್ತು. ಬಳಿಕ ಕ್ಷೇತ್ರ ಎಡ್ಮಿನಿಸ್ಟ್ರೇಟರ್ ವಿನೋದ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಯ ಪತ್ತೆಗಾಗಿ ಪೊಲೀಸ್ ತಂಡ ಕಿನ್ನಿಂಗಾರು, ಬದಿಯಡ್ಕ, ಆದೂರು ಭಾಗಗಳಲ್ಲಿ ತನಿಖೆ ನಡೆಸಿತ್ತು. ಅದರ ಬೆನ್ನಲ್ಲೇ ಅಂತಾರಾಜ್ಯ ಕಳ್ಳನಾದ ಸತೀಶ್‌ನನ್ನು ಬದಿಯಡ್ಕದಿಂದ ಬಂಧಿಸಲಾಗಿದೆ. ಈತನ ವಿರುದ್ಧ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಅಡಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಣಿಕೆ ಡಬ್ಬಿಯಲ್ಲಿ 45೦೦ ರೂ. ಇತ್ತೆನ್ನಲಾಗಿದ್ದು, ಈತನಿಂದ ಡಬ್ಬಿ ಹಾಗೂ ಮೋಟಾರ್ ಬೈಕ್ ವಶಪಡಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ.






