ಕಾಸರಗೋಡು: ರೈಲ್ವೇ ನಿಲ್ದಾಣದ ಹಳೆಯ ಕಾಲ್ನಡೆ ಮೇಲ್ಸೇತುವೆ ಮುಚ್ಚಲಾಗಿದೆ. ಇದರಿಂದಾಗಿ ಪ್ರಯಾಣಿಕರು ಸಂಕ್ಕಷ್ಟಕ್ಕೀಡಾಗಿದ್ದಾರೆ. ಇನ್ನು ರೈಲ್ವೇ ನಿಲ್ದಾಣಕ್ಕೆ ತಲುಪುವ ಪ್ರಯಾಣಿಕರು ತೆಂಕಣ ಭಾಗದಲ್ಲಿರುವ ಮೇಲ್ತೇಸುವೆಯ ಮೂಲಕ ಸಂಚರಿಸಿ ೧ನೇ ನಂಬ್ರದ ಪ್ಲಾಟ್ ಫಾರ್ಮ್‌ಗೆ ಹಾಗೂ ಅಲ್ಲಿಂದ ವಾಪಸ್ ನಡೆದುಹೋಗಬೇಕಾಗಿದೆ. ಈ ಕಾಲ್ನಡೆ ಮೇಲ್ಸೇತುವೆಯ ಲಿಫ್ಟ್ ಹಾನಿಯಾದ ಹಿನ್ನೆಲೆಯಲ್ಲಿ ವೃದ್ದರು ಹಾಗೂ ಭಿನ್ನ ಸಾಮರ್ಧ್ಯದವರು, ರೋಗಿಗಳು ಬಹಳ ತೊಂದರೆ ಅನುಭವಿಸಿದರು.
ಹೆಚ್ಚಿನ ಸಮಯಗಳಲ್ಲಿ ಲಿಫ್ಟ್ ಹಾನಿಯಾಗುತ್ತಿದೆ ಎಂದು ಪ್ರಯಾಣಿಕರು ತಿಳಿಸುತ್ತಾರೆ. ಒಂದು ವಾರದ ಹಿಂದೆ ಪಾಲಕ್ಕಾಡ್ ಡಿವಿಶನ್‌ನ ಡಿಆರ್‌ಎಂ ನಡೆಸಿದ ತಪಾಸಣೆಯಲ್ಲಿ ಉತ್ತರ ಭಾಗದಲ್ಲಿರುವ ಕಾಲ್ನಡೆ ಮೇಲ್ಸೇತುವೆಯ ಕಬ್ಬಿಣದ ಗಾರ್ಡರ್ ಸುರಕ್ಷಿತವಲ್ಲವೆಂದು ಪತ್ತೆಹಚ್ಚಿದ್ದರು. ಇದರಿಂದಾಗಿ ಈ ಕಾಲ್ನಡೆ ಮೇಲ್ಸೇತುವೆಯನ್ನು ಮುಚ್ಚಲು ನಿರ್ದೇಶ ನೀಡಲಾಗಿದೆ. ಇದೇ ವೇಳೆ ಇದೇ ಸೇತುವೆ ಮೂಲಕ ದ್ವಿತೀಯ ಪ್ರವೇಶದ್ವಾರಕ್ಕೆ ಸಂಚರಿಸಲು ದಾರಿ ಮಾಡಿಕೊಡಲಾಗಿದೆ. ಮುಚ್ಚಿದ ಮೇಲ್ಸೇತುವೆಯನ್ನು ಯಾವಾಗ ದುರಸ್ತಿಗೊಳಿಸಿ ತೆರೆದು ಕೊಡಲಾಗುವುದು ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇದುವರೆಗೂ ಅಧಿಕಾರಿಗಳು ನೀಡಿಲ್ಲ.





