ಉಪ್ಪಳ: ಮಂಜೇಶ್ವರ ವಿಧಾನಸಭಾ ಮಂಡಲದ ಮಂಗಲ್ಪಾಡಿ ಪಂಚಾಯತ್‌ಗೊಳ ಪಟ್ಟ ಶಿರಿಯ ನಿವಾಸಿಗಳ ಹಲವು ಕಾಲದ ಸಂಚಾರ ಸಮಸ್ಯೆಗೆ ಪರಿಹಾರವಾಗುತ್ತಿದೆ. ಐಕ್ಯರಂಗ ಸರಕಾರದ ಮೊದಲ ಬಜೆಟ್‌ನಲ್ಲಿ ಶಿರಿಯ ರೈಲ್ವೇ ಅಂಡರ್‌ಪಾಸ್ ನಿರ್ಮಾಣಕ್ಕಾಗಿ ಮೂರು ಕೋಟಿ ರೂ. ಮಂಜೂರು ಮಾಡಲಾಗಿದೆ. ಶಾಸಕ ಎಕೆಎಂ ಅಶ್ರಫ್‌ರ ಪ್ರೊಪೋಸಲ್‌ನ ಆಧಾರದಲ್ಲಿ ರಾಜ್ಯ ಸರಕಾರ ಬಜೆಟ್‌ನಲ್ಲಿ ಈ ಮೊತ್ತ ಮೀಸಲಿರಿಸಿದೆ.
ಹಲವಾರು ಮನೆಗಳು, ಶಿಕ್ಷಣ ಸಂಸ್ಥೆಗಳು, ಆರಾಧನಾಲಯಗಳು ನೆಲೆಗೊಂಡಿರುವ ಶಿರಿಯಕ್ಕೆ ಪ್ರಸ್ತುತ ಸಂಚಾರ ಸೌಕರ್ಯ ಬಹಳ ದುಸ್ತರವಾಗಿದೆ. ರೈಲ್ವೇ ಹಳಿ ಸಾಗುವ ಕಾರಣ ಮುಟ್ಟಂ ರೈಲ್ವೇ ಗೇಟ್‌ನಲ್ಲಿ ಇಲ್ಲಿನವರು ಸಂಚರಿಸಬೇಕಾಗುತ್ತಿದೆ. ಗೇಟ್ ಮುಚ್ಚಿದರೆ ಬಹಳ ಹೊತ್ತು ವಾಹನಗಳು ಕಾದು ನಿಲ್ಲಬೇಕಾಗಿ ಬರುತ್ತಿದೆ. ಇದರಿಂದ ಸರಿಯಾದ ಸಮಯಕ್ಕೆ ಕಚೇರಿಗಳಿಗೆ, ಶಾಲೆಗಳಿಗೆ, ಆಸ್ಪತ್ರೆಗಳಿಗೆ ತಲುಪಲು ಸಾಧ್ಯವಾಗದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರವಾಗಿ ಶಿರಿಯದಲ್ಲಿ ರೈಲ್ವೇ ಅಂಡರ್‌ಪಾಸ್ ಬೇಕೆಂಬ ಈ ಪ್ರದೇಶದವರ ಬೇಡಿಕೆಗೆ ದಶಕದ ಹಳಮೆ ಇದೆ.
ಶಾಸಕ ಎಕೆಎಂ ಅಶ್ರಫ್ ಸಮರ್ಪಿಸಿದ ಪ್ರೊಪೋಸಲ್‌ಗಳಲ್ಲಿ ಪ್ರಥಮ ಪರಿಗಣನೆ ನೀಡಿದ ಯೋಜನೆಯಾಗಿದೆ ಇದು. ಈ ಯೋಜನೆಯ ಆರಂಭ ಕ್ರಮಗಳಿಗಾಗಿ ಮಂಗಲ್ಪಾಡಿ ಪಂಚಾಯತ್ ವರ್ಷಗಳ ಹಿಂದೆ ೨೫ ಲಕ್ಷ ರೂ. ರೈಲ್ವೇಗೆ ಪಾವತಿಸಿತ್ತು. ಮೂರು ಕೋಟಿ ರೂ. ಪಾವತಿಸಿದರೆ ಅಂಡರ್‌ಪಾಸ್ ನಿರ್ಮಿಸುವುದಾಗಿ ರೈಲ್ವೇ ತಿಳಿಸಿದ ಹಿನ್ನೆಲೆಯಲ್ಲಿ ಫಂಡ್‌ಗಾಗಿ ಕಳೆದ ಸರಕಾರದ ಸಮಯದಲ್ಲೂ ಶಾಸಕರು ನಿರಂತರ ಒತ್ತಡ ಹೇರಿದ್ದರು. ಆದರೆ ಈ ಬಾರಿಯ ಹೊಸ ಸರಕಾರ ಮೊದಲ ಬಜೆಟ್‌ನಲ್ಲೇ ಈ ಬೇಡಿಕೆಗೆ ಮನ್ನಣೆ ನೀಡಿದೆ. ಮೊತ್ತ ಮಂಜೂರಾದ ಹಿನ್ನೆಲೆಯಲ್ಲಿ ಮುಂದಿನ ತಾಂತ್ರಿಕ ಕ್ರಮಗಳನ್ನು ವಿಳಂಬವಿಲ್ಲದೆ ಜ್ಯಾರಿಗೊಳಿಸಲು ಶಾಸಕ ಅಶ್ರಫ್ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶ ನೀಡಿದ್ದಾರೆ.






