ತಿರುವನಂತಪುರ: ನವಕೇರಳ ಯಾತ್ರೆ ಮಧ್ಯೆ ಪ್ರತಿಭಟಿಸಿದ ಕೆಎಸ್‌ಯು, ಯೂತ್ ಕಾಂಗ್ರೆಸ್ ಕಾರ್ಯಕರ್ತರಿಗೆ ಹಲ್ಲೆಗೈದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಗನ್‌ಮ್ಯಾನ್ ಸಹಿತ ಐದು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಪೊಲೀಸ್ ಕೇಂದ್ರದಿಂದ ಆದೇಶ ಹೊರಡಿಸಲಾಗಿದೆ. ಗನ್‌ಮ್ಯಾನ್ ಆಗಿದ್ದ ಅನಿಲ್ ಕುಮಾರ್, ಎಸ್ಕೋರ್ಟ್ ಪೊಲೀಸರಾದ ಸಂದೀಪ್, ಅರುಣ್, ವಿಪಿನ್, ಶೈಜು ಎಂಬಿವರನ್ನು ಅಮಾನತುಗೊಳಿಸಲಾಗಿದೆ.
ಅನಿಲ್ ಕುಮಾರ್ ೨೫ ವರ್ಷದಿಂದ ಪಿಣರಾಯಿ ವಿಜಯನ್‌ರ ಗನ್‌ಮ್ಯಾನ್ ಆಗಿದ್ದಾನೆ. ಡಿಸೆಂಬರ್ ೫ರಂದು ನವಕೇರಳ ಕಾರ್ಯಕ್ರಮಕ್ಕೆ ತಲುಪಿದ ಮುಖ್ಯಮಂತ್ರಿಯ ಬಸ್‌ನ ಮುಂಭಾಗದಲ್ಲಿ ಆಲಪ್ಪುಳ ಜನರಲ್ ಆಸ್ಪತ್ರೆ ಸಮೀಪ ಪ್ರತಿಭಟಿಸಿದ ಕೆಎಸ್‌ಯು ಜಿಲ್ಲಾ ಅಧ್ಯಕ್ಷ ಎ.ಡಿ. ಥೋಮಸ್, ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಜಯ್ ಜುವಲ್ ಕುರ‍್ಯಾಕೋಸ್ ಎಂಬಿವರನ್ನು ಕ್ರೂರವಾಗಿ ಹಲ್ಲೆಗೈದ ಘಟನೆಯಲ್ಲಿ ಅಮಾನತು ಕ್ರಮ ಉಂಟಾಗಿದೆ. ಎ.ಡಿ. ಥೋಮಸ್ ಈಗ ಶಾಸಕರಾಗಿ ಆಯ್ಕೆಯಾಗಿದ್ದಾರೆ.







