ಮಂಗಳೂರು: ಆಕೆ ತನಗೆ ಸಿಗಬೇಕು, ತನಗಲ್ಲದಿದ್ದರೆ ಬೇರೊಬ್ಬನೊಂದಿಗೆ ಆಕೆಯೂ ಬದುಕಿರಬಾರದು ಎನ್ನುವ ಕಪಟ ಪ್ರೀತಿಗೆ ಅಮಾಯಕ ಯುವತಿ ಬಲಿಯಾಗಿದ್ದಾಳೆ. ಬಂಟ್ವಾಳ ಬಿ ಸಿ ರೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿನ್ನೆ ಸಂಜೆ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ.
ಕಕ್ಕೆಪದವು ಸಮೀಪದ ಉಳಿ ಗ್ರಾಮದ ಕೋಡಂಗೆ ನಿವಾಸಿ ಬಾಳಪ್ಪ ಗೌಡರ ಪುತ್ರಿ ಲಾವಣ್ಯ (೨೧) ಎಂಬ ಯುವತಿ ಎರಡು ತಿಂಗಳ ಹಿಂದೆ ಕಲ್ಲಡ್ಕದ ಖಾಸಗಿ ಆಸ್ಪತ್ರೆಯ ಮೆಡಿಕಲ್ ಸ್ಟೋರ್‌ನಲ್ಲಿ ಕೆಲಸಕ್ಕೆ ಸೇರಿದ್ದಳು. ಈಕೆಯ ಸಂಬಂಧಿಕ ೨೨ ವರ್ಷದ ಚೇತನ್ ಗೌಡ ಇವಳನ್ನು ಪ್ರೀತಿಸುತ್ತಿದ್ದು, ತನ್ನನ್ನು ಪ್ರೀತಿಸಬೇಕೆಂದು ಇವಳ ಹಿಂದೆ ಅಲೆದಾಡುತ್ತಿದ್ದ. ಅಲ್ಲದೆ ತನ್ನನ್ನೇ ಮದುವೆಯಾಗಬೇಕೆಂದು ಆಕೆಯನ್ನು ಒತ್ತಾಯಿಸುತ್ತಿದ್ದನು. ಆದರೆ ಚೇತನ್ ಗೌಡನನ್ನು ವಿವಾಹವಾಗಲು ಲಾವಣ್ಯ ನಿರಾಕರಿಸಿದ್ದಳು. ಅಲ್ಲದೆ ಆತನ ಫೋನ್ ಕರೆ ಸ್ವೀಕರಿಸುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂದೇಶ ಕಳುಹಿಸಿ ತನ್ನ ಜೊತೆ ಬರದಿದ್ದರೆ ಕೊಂದುಬಿಡುತ್ತೇನೆ ಎಂಬ ಬೆದರಿಕೆ ಹಾಕಿದ್ದನೆನ್ನಲಾಗಿದೆ. ಸಂಜೆ ವೇಳೆ ಮೆಡಿಕಲ್ ಶಾಪ್‌ನಿಂದ ಬರುವಾಗ ಈ ಬಗ್ಗೆ ತನ್ನ ಹತ್ತಿರದ ಸಂಬಂಧಿಕರಿಗೆ ಲಾವಣ್ಯ ಮಾಹಿತಿ ನೀಡಿದ್ದಳು. ಬಸ್‌ನಲ್ಲಿ ಕುಳಿತಿದ್ದಾಗ ಚೇತನ್ ಕಾರಿನಲ್ಲಿ ಬಂದುದನ್ನು ಆಕೆ ಕಂಡಿದ್ದಳು. ಬಸ್‌ನಿಂದ ಇಳಿದು ಬಾ ಎಂದು ಹೇಳಿದ ಹಿನ್ನೆಲೆಯಲ್ಲಿ ಬಸ್‌ನಿಂದ ಇಳಿದು ಲಾವಣ್ಯ ಓಡಿದ್ದಾಳೆ. ಆ ವೇಳೆ ತನ್ನ ಕೈಯಲ್ಲಿದ್ದ ಕತ್ತಿಯಿಂದ ಆಕೆಯ ಕುತ್ತಿಗೆಗೆ ಬೀಸಿದ್ದು, ತಕ್ಷಣ ಕುಸಿದು ಬಿದ್ದಿದ್ದಾಳೆ. ಈ ವೇಳೆ ಯದ್ವಾತದ್ವ ಕಡಿದಿದ್ದು, ಇದನ್ನು ಕಂಡ ಕೆಲವರು ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದಲ್ಲದೆ ಯಾರೂ ಕೂಡಾ ಸಮೀಪ ತಡೆಯಲು ತೆರಳಿಲ್ಲವೆಂದು ಹೇಳಲಾಗುತ್ತಿದೆ.
ಕೃತ್ಯದ ಬಳಿಕ ಆತ ತಾನು ಬಂದಿದ್ದ ಕಾರಿನಲ್ಲೇ ತೆರಳಿದ್ದು, ಈತನನ್ನು ಪೊಲೀಸರು ಈಗ ಕಸ್ಟಡಿಗೆ ತೆಗೆದಿದ್ದಾರೆನ್ನಲಾಗಿದೆ. ಈತ ಬೆಳ್ತಂಗಡಿ ಒಡಿಲ್ನಾಳ ಗ್ರಾಮ ನಿವಾಸಿಯಾಗಿ ದ್ದಾನೆ. ಮೃತದೇಹವನ್ನು ಬಳಿಕ ಪೊಲೀಸರು ಆಸ್ಪತ್ರೆಗೆ ಸಾಗಿಸಿದ್ದರು.







