ಕೊಚ್ಚಿ: ಫ್ಯಾಶನ್ ಶೋಗೆಂದು ತಿಳಿಸಿ ಕೇರಳೀಯರಾದ ಕೆಲವು ಯುವತಿಯರನ್ನು ದುಬಾಯಿಗೆ ಕರೆದೊಯ್ದು ಅವರನ್ನು ವೇಶ್ಯಾವಾಟಿಕೆ ಜಾಲಕ್ಕೆ ಹಸ್ತಾಂತರಿಸಿದ ಪ್ರಕರಣದಲ್ಲಿ ಸಿನಿಮಾ, ಸೀರಿಯಲ್‌ನ ಕೆಲವು ಕಲಾವಿದರು ಹಾಗೂ ಗೂಂಡಾ ತಂಡಗಳನ್ನು ಕೇಂದ್ರೀಕರಿಸಿ ತನಿಖೆ ಆರಂಭಿಸಲಾಗಿದೆ.
ಯುವತಿಯರನ್ನು ದುಬಾಯಿಗೆ ತಲುಪಿಸಿ ಸೆಕ್ಸ್ ರ‍್ಯಾಕೆಟ್‌ಗೆ ಹಸ್ತಾಂತರಿಸಿದ ಪ್ರಕರಣದಲ್ಲಿ ಸೆರೆಗೀಡಾದ ಮುಖ್ಯ ಆರೋಪಿ ಆಲುವ ತೈನೋತ್ ಕಡವಿನಲ್ಲಿ ವಾಸಿಸುವ ಗುರುವಾಯೂರು ನಿವಾಸಿ ಸಿಂಧು ಯಾನೆ ಸ್ಟೋಯ್‌ಸಿ (56) ಎಂಬಾಕೆಯ ಮಗ ಹಾಗೂ ಮಗಳು ನಡೆಸುವ ಕಂಪೆನಿಯೊಂದಿಗೆ ಕೆಲವು ಸಿನಿಮಾ, ಸೀರಿಯಲ್ ಕಲಾವಿದರಿಗೆ ನಂಟಿದೆಯೆಂದು ಹೇಳಲಾಗುತ್ತಿದೆ. ಇವರ ಮುಖಾಂತರ ಯುವತಿಯರನ್ನು ಪುಸಲಾಯಿಸಿ ದುಬಾಯಿಗೆ ತಲುಪಿಸಲಾಗಿದೆಯೇ ಎಂಬ ಬಗ್ಗ ತನಿಖೆ ನಡೆಯುತ್ತಿದೆ. ರಿಮಾಂಡ್‌ನಲ್ಲಿರುವ ಎರಡನೇ ಆರೋಪಿ ತಿರುವನಂತಪುರ ಪೊಂಙವಿಳ ನವಾಸಿ ಅಲೀನ (23)ಳಿಗೆ ಮಾದಕ, ಗೂಂಡಾ ಮಾಫಿಯಾಗಳೊಂದಿಗೆ ನಂಟಿರುವುದಾಗಿ ಹೇಳಲಾಗಿದೆ. ದೂರುಗಾರರಿಗೆ ಈಕೆ ಗೂಂಡಾ ನೇತಾರ ಔರಂಗಜೇಬ್ ಎಂಬಾತನ ಬಗ್ಗೆ ತಿಳಿಸಿ ಬೆದರಿಕೆಯೊ ಡ್ಡಿರುವುದಾಗಿ ದೂರಲಾಗಿದೆ. ಆದ್ದರಿಂದ ಔರಂಗಜೇಬ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಮುಂಬಯಿ ವಿಮಾನ ನಿಲ್ದಾಣದಿಂದ ಸೆರೆಹಿಡಿದ ಸಿಂಧುಳನ್ನು ಕೊಚ್ಚಿಗೆ ತಲುಪಿಸಿ ತನಿಖೆ ನಡೆಸಲಾಗುತ್ತಿದೆ. 20 ವರ್ಷಗಳಿಂದ ಈಕೆ ದುಬಾಯಿಯಲ್ಲಿ ವಾಸಿಸುತ್ತಿದ್ದಳು. ಸೆರೆಗೀಡಾದ ಪೊನ್ನಾನಿ ನಿವಾಸಿ ಮಂಜಿಮ ರಿಮಾಂಡ್‌ನಲ್ಲದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರು ಮಹಿಳೆಯರನ್ನು ಸೆರೆಹಿಡಿಯಲು ಬಾಕಿಯಿದೆ. ದುಬಾಯಿಯಲ್ಲಿರುವ ಅವರನ್ನು ಊರಿಗೆ ತಲುಪಿಸಲು ಪೊಲೀಸರು ಕ್ರಮ ಆರಂಭಿಸಿದ್ದಾರೆ.






