ಪಯ್ಯನ್ನೂರು: ಪೆರಿಂಙೋಂ ಮಾತಮಂಗಲದಲ್ಲಿ ದೈವಕೋಲ ನೋಡಲೆಂದು ತಲುಪಿದ ವೃದ್ದೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ಅಪಹರಿಸಿದ ಘಟನೆಯಲ್ಲಿ ಇಬ್ಬರನ್ನು ಸೆರೆ ಹಿಡಿದಿದ್ದಾರೆ. ಸಹಾಯಿಗಳಾದ ಇಬ್ಬರಿಗಾಗಿ ತನಿಖೆ ತೀವ್ರಗೊಳಿಸಿದ್ದಾರೆ. ಪಾಣಪ್ಪುಳ ಪರವೂರಿನ ಪಿ.ವಿ. ರುಕ್ಮಿಣಿ (76)ರ ಚಿನ್ನದ ಸರವನ್ನು ಅಪಹರಿಸಲಾಗಿತ್ತು. ಕರ್ನಾಟಕ ಕೋಲಾರ ಮುಲ್ಬಾಗ್ ನಿವಾಸಿ ಹಾಗೂ ವಿರಾಜ್‌ಪೇಟೆ ಚಾಮುಂಡೇಶ್ವರಿ ಕ್ಷೇತ್ರ ಸಮೀಪ ವಾಸಿಸುವ ಅನಿತ (39), ವಿರಾಜ್‌ಪೇಟೆ ಟವರ್‌ಗೇಟ್ ನಿವಾಸಿ ಆರ್. ಗೀತ (40) ಎಂಬಿವರನ್ನು ಪೆರಿಂಙೋಂ ಪೊಲೀಸರು ಬಂಧಿಸಿದ್ದಾರೆ.
ಮಾತಮಂಗಲ ಪುಲಿಯೂರ್‌ಕಾಳಿ ಕ್ಷೇತ್ರದಲ್ಲಿ ಆದಿತ್ಯವಾರ ಸಂಜೆ ೩ ಗಂಟೆ ವೇಳೆಗೆ ಘಟನೆ ನಡೆದಿದೆ. ರುಕ್ಮಿಣಿ ದೈವಕ್ಕೆ ಕೈ ಮುಗಿಯಲೆಂದು ನಿಂತಿರುವಾಗ ನಾಲ್ಕು ಮಂದಿ ಸೇರಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿದ್ದಾರೆ. ಸುಮಾರು ಐದೂವರೆ ಪವನ್ ತೂಕದ ಈ ಸರಕ್ಕೆ 6 ಲಕ್ಷ ರೂ.ಮೌಲ್ಯ ಅಂದಾಜಿಸಲಾಗಿದೆ. ಸರವನ್ನು ಅಪಹರಿಸುವ ವೇಳೆ ರುಕ್ಮಿಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಅಪಹರಣಕಾರರು ಓಡಿದ ಅದೇ ದಾರಿಯಲ್ಲಿ ರುಕ್ಮಿಣಿ ಕೂಡಾ ಬೊಬ್ಬೆ ಹೊಡೆದುಕೊಂಡು ಓಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಇಬ್ಬರನ್ನು ಸೆರೆ ಹಿಡಿದಿದ್ದಾರೆ. ಉಳಿದ ಇಬ್ಬರು ಪರಾರಿಯಾಗಿದ್ದಾರೆನ್ನಲಾಗಿದೆ. ಸರ ಅಪಹರಣದ ದೃಶ್ಯ ಅಂಬಲತ್ತರದ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಇದನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಸೆರೆಯಾದ ಮಹಿಳೆಯರಿಂದ ಅಪಹರಿಸಿದ ಚಿನ್ನದ ಸರವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಪರಾರಿಯಾದವರ ಕೈಯಲ್ಲಿ ಸರ ಇರಬೇಕೆಂದು ಪೊಲೀಸರು ಶಂಕಿಸಿದ್ದಾರೆ.







