ಮುಖ್ಯಮಂತ್ರಿ ಸ್ಥಾನಕ್ಕೆ ವಿ.ಡಿ. ಸತೀಶನ್ ಮೊದಲ ಪರಿಗಣನೆ

ನವದೆಹಲಿ: ಕೇರಳದಲ್ಲಿ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಿರುವ ಚರ್ಚೆಗಳು  ಬಿರುಸಿನಿಂದ ನಡೆಯುತ್ತಿರುವಂತೆಯೇ ಮುಖ್ಯಮಂತ್ರಿ ಸ್ಥಾನ ವಿ.ಡಿ. ಸತೀಶನ್‌ರಿಗೆ ಲಭಿಸುವ ಸಾಧ್ಯತೆ ಇದೆಯೆಂದು ಸಂಬಂಧಪಟ್ಟ ವರದಿಗಳು ಸೂಚಿಸುತ್ತಿವೆ.  ಹೆಚ್ಚಿನ ಶಾಸಕರು ಕೆ.ಸಿ. ವೇಣುಗೋಪಾಲ್‌ರ ಪರ ಬೆಂಬಲ ವ್ಯಕ್ತಪಡಿಸಿದ್ದರೂ ಮುಖ್ಯಮಂತ್ರಿ ಸ್ಥಾನದ ರೇಸ್‌ನಿಂದ ಸ್ವಯಂ ಆಗಿ ಹಿಂದಕ್ಕೆ ಸರಿಯುವಂತೆ ಕಾಂಗ್ರೆಸ್ ಹೈಕಮಾಂಡ್ ಕೆ.ಸಿ. ವೇಣುಗೋಪಾಲ್‌ರ ಮೇಲೆ ಒತ್ತಡ ಹೇರುತ್ತಿರುವುದಾಗಿಯೂ ವರದಿಗಳು ಸೂಚಿಸುತ್ತಿವೆ. ಇದೇ ಸಂದರ್ಭದಲ್ಲಿ ಮುಸ್ಲಿಂ ಲೀಗ್ ಮತ್ತು ಯುಡಿಎಫ್‌ನ ಇತರ ಹೆಚ್ಚಿನ ಘಟಕ ಪಕ್ಷಗಳು ವಿ.ಡಿ. ಸತೀಶನ್‌ರಿಗೆ ಬೆಂಬಲ ಸೂಚಿಸಿವೆ.   ಮುಖ್ಯಮಂತ್ರಿ ಆಯ್ಕೆಯ ವಿಷಯದಲ್ಲಿ ಕೇರಳಕ್ಕೆ ಆಗಮಿಸಿ ಅಭಿಪ್ರಾಯ ಕ್ರೋಢೀಕರಿಸಿದ ಎಐಸಿಸಿ ವೀಕ್ಷಕರು ತಮ್ಮ ವರದಿಯನ್ನು  ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಈಗಾಗಲೇ ಸಲ್ಲಿಸಿದ್ದಾರೆ. ಈ ವರದಿಯ ಮೇಲಿನ ಚರ್ಚೆ ದೆಹಲಿಯಲ್ಲಿ ಇಂದು ಆರಂಭಗೊಂಡಿದೆ. ಹೆಚ್ಚಿನ ಶಾಸಕರ ಬೆಂಬಲ ಕೆ.ಸಿ. ವೇಣುಗೋಪಾಲ್ ರಿಗಿದ್ದರೂ ಹೈಕಮಾಂಡ್‌ನ ಒತ್ತಡದಿಂದ ಅವರು ಮುಖ್ಯಮಂತ್ರಿ ಸ್ಥಾನದಿಂದ ಹಿಂದಕ್ಕೆ ಸರಿಯಬೇಕಾದ ಸ್ಥಿತಿಯತ್ತ ಬೆಳವಣಿಗೆಗಳು ಸಾಗುತ್ತಿವೆ. ಒಂದು ವೇಳೆ ಒತ್ತಡಕ್ಕೆ ಮಣಿದು ವೇಣುಗೋಪಾಲ್ ಮುಖ್ಯಮಂತ್ರಿ ರೇಸ್‌ನಿಂದ ಹಿಂದಕ್ಕೆ ಸರಿದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ವಿ.ಡಿ. ಸತೀಶನ್‌ರಿಗೆ ನೀಡಬೇಕಾಗಿ ಬರಲಿದೆ. ಈ ಕುರಿತಾದ ಅಂತಿಮ ತೀರ್ಮಾನ ರಾಹುಲ್ ಗಾಂಧಿಗೆ ಬಿಟ್ಟುಕೊಡಲಾಗಿದೆ.  ಈ ವಿಷಯದಲ್ಲಿ ಅವರು ವಿ.ಡಿ. ಸತೀಶನ್, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲರೊಂದಿಗೆ  ಪ್ರತ್ಯೇಕ ಚರ್ಚೆ ನಡೆಸಲಿದ್ದಾರೆ. ಅದರ ಆಧಾರದಲ್ಲಿ ಅವರು ಕೈಗೊಳ್ಳುವ ತೀರ್ಮಾನ ಈ ವಿಷಯದಲ್ಲಿ ಅಂತಿಮವಾಗಲಿದೆ.

RELATED NEWS

You cannot copy contents of this page