ಅಗಲಿದ ಸಿಪಿಐ ನೇತಾರ ಬಿ.ವಿ. ರಾಜನ್‌ರಿಗೆ ನೂರಾರು ಮಂದಿಯಿಂದ ಅಂತಿಮ ನಮನ

ಮಂಜೇಶ್ವರ: ಅಗಲಿದ ಹಿರಿಯ ಸಿಪಿಐ ನೇತಾರ ಬಂಗ್ರಮಂಜೇಶ್ವರ ರಾಮತ್ ಮಜಲ್ ನಿವಾಸಿ ಬಿ.ವಿ. ರಾಜನ್ (೬೮) ಅವರಿಗೆ ವಿವಿಧ ರಾಜಕೀಯ ಪಕ್ಷಗಳ ನೇತಾರರು, ಕಾರ್ಯಕರ್ತರು ಸಹಿತ ನೂರಾರು ಮಂದಿ ಅಂತಿಮ ನಮನ ಸಲ್ಲಿಸಿದರು. ಸಿಪಿಐ ಕಾಸರಗೋಡು ಜಿಲ್ಲಾ ಕೌನ್ಸಿಲ್ ಕಚೇರಿಯಲ್ಲಿ ಇಂದು ಬೆಳಿಗ್ಗೆ ಸಾರ್ವಜನಿಕ ದರ್ಶನಕ್ಕಿರಿಸಿದ ಮೃತದೇಹಕ್ಕೆ ಪಕ್ಷದ ಸಹಿತ ವಿವಿಧ ರಾಜಕೀಯ, ಸಾಮಾಜಿಕ ರಂಗಗಳ ಮುಂದಾಳುಗಳು ಅಂತಿಮ ನಮನ ಸಲ್ಲಿಸಿದರು. ಬಳಿಕ ಮೃತದೇಹವನ್ನು ಮಂಜೇಶ್ವರಕ್ಕೆ ಕೊಂಡೊಯ್ದು ರಾಮತ್ ಮಜಲ್ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಬಿ.ವಿ. ರಾಜನ್ ಅವರು ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ, ಎ.ಐ.ಟಿ.ಯು.ಸಿ. ಜಿಲ್ಲಾ ಕೋಶಾಧಿಕಾರಿ, ಮಂಜೇಶ್ವರ ತಾಲೂಕು ಅಭಿವೃದ್ಧಿ ಸಮಿತಿ ಸದಸ್ಯ, ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ, ಕಾಸರಗೋಡು ಪ್ಲಾಂಟೇಶನ್ ಕಾರ್ಪರೇಶನ್ ಮಾಜಿ ಸದಸ್ಯರೂ ಆಗಿದ್ದರು. ಅಲ್ಲದೆ ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ೨೫ ವರ್ಷಕಾಲ ನಿರ್ದೇಶಕರಾಗಿಯೂ, ಐದು ವರ್ಷ ಅಧ್ಯಕ್ಷರಾಗಿದ್ದ ಅವರು ಬ್ಯಾಂಕ್‌ನ ಅಭಿವೃದ್ಧಿಗೆ ಕಾರಣಕರ್ತ ರಾಗಿದ್ದರು. ಪಕ್ಷದಲ್ಲಿ ಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡಿದ್ದ ಬಿ.ವಿ. ರಾಜನ್ ನಿನ್ನೆ ಬೆಳಿಗ್ಗೆ ಯಿಂದ ಮಂಜೇಶ್ವರದಲ್ಲಿ ಶುಚಿತ್ವ ಬಗ್ಗೆ ನಡೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಮನೆಗೆ ಆಗಮಿಸಿ ಊಟ ಮಾಡಿದ್ದರು. ಸಂಜೆ ಜ್ವರ ಅನುಭವಗೊಂಡ ಅವರು ಆಸ್ಪತ್ರೆಯಿಂದ ಔಷಧಿ ಪಡೆದು ರಿಕ್ಷಾದಲ್ಲಿ ಮನೆಗೆ ಮರಳಿದ್ದರು. ಮನೆಗೆ ತಲುಪುತ್ತಿದ್ದಂತೆ ಹೃದಯಾಘಾತವುಂಟಾಗಿ ನಿಧನ ಸಂಭವಿಸಿದೆ.

ಮೃತರು ಪತ್ನಿ ನಾರಾಯಣಿ, ಪುತ್ರಿ ರಮ್ಯ, ಅಳಿಯ ಯದುನಂದನ್, ಸಹೋದರ ಚಂದ್ರಶೇಖರ, ಸಹೋದರಿ ಮೀನಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇತರ ಸಹೋದರ- ಸಹೋದರಿಯರಾದ ಅಪ್ಪಯ್ಯ ಬಲ್ಯಾಯ, ಅಶ್ವಿನ್ ಕುಮಾರ್, ಸಾವಿತ್ರಿ, ಲಲಿತ ಎಂಬಿವರು ಈ ಹಿಂದೆ ನಿಧನಹೊಂದಿದ್ದಾರೆ.

Leave a Reply

Your email address will not be published. Required fields are marked *

You cannot copy content of this page