ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ವಶ: ಇಬ್ಬರ ಸೆರೆ
ಬದಿಯಡ್ಕ: ಪೆರ್ಲ ಚೆಕ್‌ಪೋಸ್ಟ್ ಸಮೀಪ ಬದಿಯಡ್ಕ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಕಾರಿನಲ್ಲಿ ಸಾಗಿಸುತ್ತಿದ್ದ 83.99 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಕಾಸರಗೋಡು ತಾಯಲಂಗಾಡಿ ನಿವಾಸಿ ಅಬ್ದುಲ್ ಸಲಾಂ (29), ಚೆಂಗಳ ಬಾಲಡ್ಕ ನಿವಾಸಿ ಮುಹಮ್ಮದ್ ಸಲೀಲ್ (41) ಎಂಬಿವರನ್ನು ಬದಿಯಡ್ಕ ಎಸ್.ಐ. ಕೆ.ಕೆ. ನಿಖಿಲ್ ನೇತೃತ್ವದ ಪೊಲೀಸ್ ತಂಡ ಸೆರೆ ಹಿಡಿದಿದೆ. ಮೊನ್ನೆ ಸಂಜೆ 7 ಗಂಟೆ ವೇಳೆ ಪೆರ್ಲ ಚೆಕ್ ಪೋಸ್ಟ್ ಸಮೀಪ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ತಲುಪಿದ ತಾತ್ಕಾಲಿಕ ನೋಂದಣಿ ನಂಬ್ರದ ಕಾರನ್ನು ತಪಾಸಣೆ ನಡೆಸಿದಾಗ ಅದರಲ್ಲಿ ಮಾದಕವಸ್ತು ಪತ್ತೆಯಾಗಿದೆ. ಇದನ್ನು ಬೆಂಗಳೂರಿನಿಂದ ತಂದಿರುವುದಾಗಿ ತಿಳಿದು ಬಂದಿದೆ. ಇದಕ್ಕೆ ಎರಡು ಲಕ್ಷ ರೂಪಾಯಿ ಮೌಲ್ಯ ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.