ಕಾಸರಗೋಡನ್ನು ಯುಡಿಎಫ್ ಮತ್ತೆ ಉಳಿಸಿಕೊಳ್ಳಲಿದೆಯೇ?

ಕಾಸರಗೋಡು: ಕೇರಳದ  ಅತ್ಯುತ್ತರದಲ್ಲಿ ಕರ್ನಾಟಕದೊಂದಿಗೆ ತಾಗಿಕೊಂಡಿರುವ  ಕ್ಷೇತ್ರವಾಗಿದೆ ಕಾಸರಗೋಡು ಲೋಕಸಭಾ ಕ್ಷೇತ್ರ 1957ರಲ್ಲಿ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ. ಈ ಲೋಕಸಭಾ ಕ್ಷೇತ್ರದಲ್ಲಿ  ಕಾಸರಗೋಡು ಜಿಲ್ಲೆಯ ಮಂಜೇಶ್ವರ,  ಕಾಸರಗೋಡು, ಉದುಮ, ಹೊಸದುರ್ಗ, ತೃಕ್ಕರಿಪುರ , ಕಣ್ಣೂರು ಜಿಲ್ಲೆಯ ಕಲ್ಯಾಶ್ಶೇರಿ ಮತ್ತು ಪಯ್ಯನ್ನೂರು ವಿಧಾನಸಭಾ ಕ್ಷೇತ್ರಗಳು ಒಳಗೊಂಡಿವೆ.

1957ರಲ್ಲಿ ಈ ಕ್ಷೇತ್ರಕ್ಕೆ ನಡೆದ ಪ್ರಥಮ ಚುನಾವಣೆಯಲ್ಲಿ ಸಿಪಿಎಂನ ಎ.ಕೆ. ಗೋಪಾಲನ್ ಗೆದ್ದಿದ್ದರು. ಬಳಿಕ 1962 ಮತ್ತು 1967ರಲ್ಲಿ ಅವರು ಸತತ ಮೂರು ಬಾರಿ ಈ ಕ್ಷೇತ್ರದ ಸಂಸದರಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು.

1971ರಲ್ಲಿ ಕಾಂಗ್ರೆಸ್‌ನ ಕಡನ್ನಪ್ಪಳ್ಳಿ ರಾಮಚಂದ್ರನ್ ಅವರು ಸಿಪಿಎಂನ್ನು ಸೋಲಿಸಿ ಇಲ್ಲಿ ಗೆದ್ದಿದ್ದರು. 1977ರಲ್ಲಿ ಅವರೇ ಗೆಲುವನ್ನು ಪುನರಾವರ್ತಿಸಿದ್ದರು.

1980ರಲ್ಲಿ ಎಂ. ರಾಮಣ್ಣ ರೈ (ಸಿಪಿಎಂ), 1984ರಲ್ಲಿ ಐ. ರಾಮಣ್ಣ ರೈ (ಕಾಂಗ್ರೆಸ್), 1989 ಮತ್ತು 1991ರಲ್ಲಿ ಮತ್ತೆ ಎಂ. ರಾಮಣ್ಣ ರೈ (ಸಿಪಿಎಂ), 1996, 1998 ಮತ್ತು 1999ರಲ್ಲಿ ಸಿಪಿಎಂನ ಟಿ. ಗೋವಿಂದನ್, 2004, 2009 ಮತ್ತು 2014ರಲ್ಲಿ ಪಿ. ಕರುಣಾಕರನ್ (ಸಿಪಿಎಂ) ಸತತ ಮೂರು ಬಾರಿ ಈ ಕ್ಷೇತ್ರದಿಂದ ಲೋಕಸಭೆಗೆ ಆರಿಸಲ್ಪಟ್ಟಿದ್ದರು.

2019ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಎಡರಂಗದ ಅಧಿಪತ್ಯವನ್ನು ಕೊನೆಗೊಳಿಸಿ ಕಾಂಗ್ರೆಸ್‌ನ ರಾಜ್‌ಮೋಹನ್ ಉಣ್ಣಿತ್ತಾನ್ ಗೆಲುವಿನ ಪತಾಕೆ  ಹಾರಿಸಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ರಾಜ್‌ಮೋಹನ್ ಉಣ್ಣಿತ್ತಾನ್ (ಕಾಂಗ್ರೆಸ್)4,74,961 (ಶೇ. 43.50) ಮತಗಳು ಲಭಿಸಿ ಅವರು 40,439 ಮತಗಳ ಅಂತರದಲ್ಲಿ ಗೆದ್ದುಕೊಂಡಿದ್ದರು. ಎಡರಂಗ (ಸಿ ಪಿಎಂ)ನ ಕೆ.ಪಿ ಸತೀಶ್ಚಂದ್ರನ್‌ರಿಗೆ 4,34,593 (ಶೇ. 39.80) ಮತ್ತು ಎನ್‌ಡಿಎ (ಬಿಜೆಪಿ)ಯ ರವೀಶ ತಂತ್ರಿ ಕುಂಟಾರುರಿಗೆ 1,76,049 (ಶೇ. 16.13) ಮತ ಲಭಿಸಿತ್ತು. ಅಂದು ಈ ಲೋಕಸಭಾ ಕ್ಷೇತ್ರದಲ್ಲಿದ್ದ ಒಟ್ಟು 13,63,937 ಮತದಾರರ ಪೈಕಿ 10,91,752 (ಶೇ. 80.66) ಮಂದಿ ಮತ ಚಲಾಯಿಸಿದ್ದರು.

ಇನ್ನು ಈ ಬಾರಿ ಚುನಾವಣೆಯಲ್ಲಿ ಹಾಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಯುಡಿಎಫ್ (ಕಾಂಗ್ರೆಸ್) ಉಮೇದ್ವಾರರಾಗಿ ಮತ್ತೆ ಕಣಕ್ಕಿಳಿದಿದ್ದಾರೆ. ಕಳೆದ  ಬಾರಿಯಂತೆ ಈಬಾರಿಯೂ  ತನ್ನ ಗೆಲುವನ್ನು ಮುಂದುವರಿಸುವ ತುಂಬು ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಎಡರಂಗದ ಉಮೇದ್ವಾರರಾಗಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ. ಬಾಲಕೃಷ್ಣನ್‌ರನ್ನು ಈ ಬಾರಿ ಚುನಾವಣಾ ಕಣಕ್ಕಿಳಿಸಲಾಗಿದೆ. ಕಳೆದ ಬಾರಿ ಎಡರಂಗದ ಕೈಬಿಟ್ಟ ಈ ಕ್ಷೇತ್ರವನ್ನು ಚುನಾವಣೆಯಲ್ಲಿ ಗೆದ್ದು ಅದನ್ನು ಮತ್ತೆ ತಮ್ಮ ಕೈವಶ ಮಾಡಿಕೊಳ್ಳುವ ತುಂಬು ನಿರೀಕ್ಷೆಯನ್ನು ಎಂ.ವಿ. ಬಾಲಕೃಷ್ಣನ್ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಎನ್‌ಡಿಎ ಉಮೇದ್ವಾರರಾಗಿ  ಹೊಸ ಮುಖ ವರ್ಕಾಡಿ ನಿವಾಸಿ ಹಾಗೂ ಈಗ ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯೆ  ಹಾಗೂ ಕನ್ನಡಿಗರಾಗಿರುವ ಎಂ.ಎಲ್. ಅಶ್ವಿನಿಯವರನ್ನು ಬಿಜೆಪಿ  ಅಚ್ಚರಿ ಎಂಬಂತೆ ಕಣಕ್ಕಿಳಿಸಿದೆ. ಆ ಮೂಲಕ ಮಹಿಳೆಯರ ಮತಗಳನ್ನು ಇನ್ನಷ್ಟು ಹೆಚ್ಚಾಗಿ ತನ್ನತ್ತ ಸೆಳೆದು ಹಾಗೂ ಮೋದಿ ಅಲೆಯ ಪ್ರಭಾವದಿಂದ ಈ ಕ್ಷೇತ್ರದಲ್ಲಿ ತಾವರೆ ಅರಳಿಸಿ ಆ ಮೂಲಕ ಚೊಚ್ಚಿಲವಾಗಿ ಗೆದ್ದುಕೊಳ್ಳುವ ಶತಪ್ರಯತ್ನದಲ್ಲಿ ಅಶ್ವಿನಿಯವರು  ತೊಡಗಿದ್ದಾರೆ. ಆದರೆ ವಿಜಯಲಕ್ಷ್ಮಿ ಯಾರಿಗೆ ಒಲಿಯುವಳು ಎಂಬುವುದನ್ನು ಫಲಿತಾಂಶವೇ ನಿರ್ಣಯಿಸಲಿದೆ.

Leave a Reply

Your email address will not be published. Required fields are marked *

You cannot copy content of this page