ಕುಟುಂಬ ದೈವಮಹೋತ್ಸವ ವೀಕ್ಷಿಸಲು ತೆರಳಿದ್ದ ವೇಳೆ ಮನೆಯಿಂದ ನಗ-ನಗದು ಕಳವು
ಬದಿಯಡ್ಕ: ಕುಟುಂಬ ದೈವ ಮಹೋತ್ಸವ ವೀಕ್ಷಿಸಲು ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ೭ ಪವನ್ ಚಿನ್ನಾಭರಣ ಹಾಗೂ ೬೫ ಸಾವಿರ ರೂಪಾಯಿಯನ್ನು ಕಳವು ನಡೆಸಿದ್ದು, ಈ ಬಗ್ಗೆ ಬದಿಯಡ್ಕ ಪೊಲೀಸರು ತನಿಖೆ ತೀವ್ರಗೊಳಿಸಿ ದ್ದಾರೆ. ಬದಿಯಡ್ಕ ಬಳಿಯ ಸಾಲೆತ್ತಡ್ಕ ಎಂಬಲ್ಲಿ ಯಶೋದ ಎಂಬವರ ಮನೆಯಲ್ಲಿ ಮೊನ್ನೆ ರಾತ್ರಿ ಈ ಕಳವು ನಡೆದಿದೆ. ಯಶೋದ ಹಾಗೂ ಮಕ್ಕಳು ಸಂಜೆ ಮನೆಗೆ ಬೀಗ ಜಡಿದು ನೆಕ್ರಾಜೆ ಯಲ್ಲಿ ದೈವ ಮಹೋತ್ಸವ ವೀಕ್ಷಿಸಲು ತೆರಳಿ ದ್ದರು. ರಾತ್ರಿ ೧೧.೪೫ವೇಳೆ ಮನೆಗೆ ಮರಳಿ ಬಂದಾಗ ಕಳವು ನಡೆದ ವಿಷಯ ಅರಿವಿಗೆ ಬಂದಿದೆ. ಮನೆಯ ಅಡುಗೆ ಕೋಣೆಯ ಬಾಗಿಲು ಮುರಿದು ಕಳ್ಳರು ಒಳಗೆ ನುಗ್ಗಿದ್ದಾರೆ. ಈ ಬಗ್ಗೆ ಯಶೋದ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.