ಜಲ್ಲಿ ಲಾರಿಗಳನ್ನು ತಡೆದು ನಿಲ್ಲಿಸಿ ಬೆದರಿಕೆ; ಕ್ರಷರ್ ಮೆನೇಜರ್‌ಗೆ ಹಲ್ಲೆ
ಬದಿಯಡ್ಕ: ಜಲ್ಲಿ ಕೊಂಡೊಯ್ಯುವ ಲಾರಿಗಳನ್ನು ತಡೆದು ನಿಲ್ಲಿಸಿ ಹಣ ಕೇಳುವುದನ್ನು ಪ್ರಶ್ನಿಸಿದ ಕ್ರಷರ್‌ನ ಮೆನೇಜರ್‌ಗೆ ಹಲ್ಲೆಗೈದ ಬಗ್ಗೆ ದೂರುಂಟಾಗಿದೆ. ನೀರ್ಚಾಲ್‌ನ ಕ್ರಷರ್ ಮೆನೇಜರ್ ಆಗಿರುವ ಕಣ್ಣೂರು ಉದಯಗಿರಿ ಟಾಬೋರ್ ನಿವಾಸಿಯಾದ ಪರವುಂಗಾಲ್ ಹೌಸ್‌ನ ಅಮಲ್ ಜೋರ್ಜ್‌ರ ದೂರಿನಂತೆ ಬದಿಯಡ್ಕ ಪೊಲೀಸರು ಇಬ್ಬರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಅಹಮ್ಮದ್, ಇಷಾಕ್ ಎಂಬಿವರ ವಿರುದ್ಧ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೊನ್ನೆ ಈ ಘಟನೆ ನಡೆದಿದೆ. ಕ್ರಷರ್‌ನಿಂದ ಜಲ್ಲಿಕಲ್ಲುಗಳನ್ನು ಹೇರಿ ಸಾಗುತ್ತಿರುವ ಲಾರಿಗಳನ್ನು ತಡೆದು ನಿಲ್ಲಿಸಿ ಕಾನೂನು ವಿರುದ್ಧವಾಗಿ ಹಣ ಕೇಳಿರುವುದಾಗಿ ಹೇಳಲಾಗುತ್ತಿದೆ. ಈ ವಿಷಯವನ್ನು ತಿಳಿದು ತಲುಪಿದ ದೂರುಗಾರ ಹಣ ಕೇಳಿದವರನ್ನು ಪ್ರಶ್ನಿಸಿದ್ದರು. ಇದರ ದ್ವೇಷದಿಂದ ಅಹಮ್ಮದ್ ಹಾಗೂ ಇಷಾಕ್ ಸೇರಿ ದೂರುಗಾರನನ್ನು ತಡೆದು ನಿಲ್ಲಿಸಿ ಹಲ್ಲೆಗೈದು ಅವಾಚ್ಯವಾಗಿ ನಿಂದಿಸಿರುವುದಾಗಿ ಬದಿಯಡ್ಕ ಪೊಲೀಸರು ದಾಖಲಿಸಿಕೊಂಡ ಕೇಸಿನಲ್ಲಿ ತಿಳಿಸಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.