ಜೋಡುಕಲ್ಲು ಹೊಳೆಯಿಂದ ಅನಧಿಕೃತ ಹೊಯ್ಗೆ ಸಂಗ್ರಹ ತೀವ್ರ: ಕಡವು, ದೋಣಿ ನಾಶಪಡಿಸಿದ ಪೊಲೀಸ್
ಉಪ್ಪಳ: ಹೊಳೆಗಳಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸುವ ದಂಧೆ ತೀವ್ರಗೊಂಡಿದೆ. ಜೋಡುಕಲ್ಲು ಹೊಳೆಯಿಂದ ರಾತ್ರಿ-ಹಗಲೆಂಬ ವ್ಯತ್ಯಾಸವಿಲ್ಲದೆ ಹೊಯ್ಗೆ ಸಂಗ್ರಹ ನಡೆಯುತ್ತಿದೆ. ಅನ್ಯರಾಜ್ಯ ಕಾರ್ಮಿಕ ರನ್ನು ಬಳಸಿಕೊಂಡು ಇಲ್ಲಿ ಹೊಯ್ಗೆ ಸಂಗ್ರಹ ನಡೆಯುತ್ತಿದೆಯೆಂದು ದೂರಲಾಗಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಡಿವೈಎಸ್ಪಿಯವರ ನಿರ್ದೇಶದಂತೆ ಮಂಜೇಶ್ವರ ಎಸ್ಐ ನಿಖಿಲ್ ನಿನ್ನೆ ಕಾರ್ಯಾಚರಣೆ ನಡೆಸಿದ್ದಾರೆ.
ಜೋಡುಕಲ್ಲು ಹೊಳೆ ಬಳಿ ಕಾರ್ಯಾಚರಿಸುತ್ತಿದ್ದ ಕಡವಿಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಅಲ್ಲಿದ್ದ ಕಾರ್ಮಿಕರು ಓಡಿ ಪರಾರಿಯಾಗಿದ್ದಾರೆ. ಬಳಿಕ ಕಡವು ಹಾಗೂ ಒಂದು ದೋಣಿಯನ್ನು ಪೊಲೀಸರು ಜೆಸಿಬಿ ಬಳಸಿ ನಾಶಗೊಳಿಸಿದ್ದಾರೆ. ಕುಂಡುಕೊಳಕೆ ಸಮುದ್ರ ತೀರದಿಂದಲೂ ಹೊಯ್ಗೆ ಸಂಗ್ರಹ ನಡೆಯುತ್ತಿದೆಯೆಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಇದರಂತೆ ಅಲ್ಲಿಗೂ ದಾಳಿ ನಡೆಸಲಾಗಿದೆ. ಆದರೆ ಅಲ್ಲಿ ಏನನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲವೆನ್ನಲಾಗಿದೆ.