ದುರಂತ ಆವರಿಸಿದ ವಯನಾಡಿಗೆ ಕಾಸರಗೋಡಿನಿಂದ ಸಹಾಯಹಸ್ತ
ಕಾಸರಗೋಡು: ಭಾರೀ ಭೂ ಕುಸಿತದಿಂದ ಸಾವು-ನೋವಿನಿಂದ ತತ್ತರಿಸುತ್ತಿರುವ ವಯನಾಡು ಜಿಲ್ಲೆಗೆ ಕಾಸರಗೋಡು ಜಿಲ್ಲೆಯವರೂ ಸಹಾಯಹಸ್ತ ಚಾಚಿದ್ದಾರೆ.
ಇದರಂತೆ ಅಗತ್ಯದ ಸಾಮಗ್ರಿಗಳನ್ನು ಜಿಲ್ಲೆಯಿಂದ ವಯನಾಡಿಗೆ ವಾಹನಗಳಲ್ಲಿ ಕಳುಹಿಸಿಕೊಡಲಾಗುತ್ತಿದೆ. ಮಾತ್ರವಲ್ಲ ಆರ್ಥಿಕ, ವೈದ್ಯಕೀಯ ನೆರವುಗಳ ಮಹಾಪೂರವೇ ವಯನಾಡಿಗೆ ಹರಿಯತೊಡಗಿದೆ. ಸಂತ್ರಸ್ತರ ಪುನರ್ವಸತಿಗೆ ಅಗತ್ಯದ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ. ಅಗತ್ಯದ ಸಹಾಯಕ್ಕಾಗಿ ಕಾಸರಗೋಡು ಜಿಲ್ಲೆಯಿಂದ ಪೊಲೀಸರು, ಅಗ್ನಿಶಾಮಕದಳ ಸಿಬ್ಬಂದಿಗಳು, ಕಂದಾಯ ಸಿಬ್ಬಂದಿಗಳನ್ನು ವಯನಾಡಿಗೆ ಕಳುಹಿಸಿಕೊಡಲಾಗುತ್ತಿದೆ.
ಸಂತ್ರಸ್ತರಿಗಾಗಿ ಪ್ಯಾಕೆಟ್ ಮಾಡಲಾದ ಆಹಾರ ಸಾಮಗ್ರಿಗಳು, ಟೂತ್ಪೇಸ್ಟ್, ಸಾಬೂನು, ಬಟ್ಟೆಬರೆಗಳು, ಬಿಸ್ಕೆಟ್, ಪಾತ್ರೆಗಳು, ಸ್ಯಾನಿಟರಿ ಪ್ಯಾಡ್ಗಳು, ಕಂಬಳಿ, ಬಿಂದಿಗೆ, ಟಾರ್ಚ್, ರೈನ್ಕೋಟ್ಗಳು ಇತ್ಯಾದಿಗಳು ಒಳಗೊಂಡ ಕಿಟ್ಗಳನ್ನು ಜಿಲ್ಲಾಡಳಿತ ನೇತೃತ್ವದಲ್ಲಿ ವಯನಾಡಿಗೆ ಕಳುಹಿಸಿಕೊಡಲಾಗುತ್ತಿದೆ.
ಇದರ ಹೊರತಾಗಿ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದಲೂ ಅಗತ್ಯದ ನೆರವು ನೀಡಲಾಗುತ್ತಿದೆ.