ನವಕೇರಳ ಸಭೆ ನಾಳೆ ಮಂಜೇಶ್ವರದಿಂದ ಚಾಲನೆ:  ಮುಖ್ಯಮಂತ್ರಿ, ಸಚಿವರು ಕಾಸರಗೋಡಿಗೆ

ಮಂಜೇಶ್ವರ: ನವಕೇರಳ ಸಭೆಗೆ ನಾಳೆ ಮಂಜೇಶ್ವರದಿಂದ  ಚಾಲನೆ ದೊರಕಲಿದೆ. ಇದರಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇತರ  ಎಲ್ಲಾ ಸಚಿವರು ಇಂದು ಸಂಜೆ ತಿರುವನಂತಪುರದಿಂದ ಕಾಸರಗೋಡಿನತ್ತ ಪ್ರಯಾಣ ಆರಂಭಿಸುವರು.  ಸಚಿವರುಗಳ ಪೈಕಿ ಚಿಂಜುರಾಣಿ ಹಾಗೂ ಅಹಮ್ಮದ್ ದೇವರ್‌ಕೋವಿಲ್ ಇಂದು ಸಂಜೆಯೇ ಕಾಸರಗೋಡಿಗೆ ಆಗಮಿಸುವರು. ಮುಖ್ಯ ಮಂತ್ರಿ  ಇಂದು ಸಂಜೆ ತಿರುವನಂ ತಪುರದಿಂದ ಕಣ್ಣೂರಿಗೆ ಆಗಮಿಸುವರು. ಅಲ್ಲಿಂದ ಅವರು ನಾಳ ಮಧ್ಯಾಹ್ನ ಕಾಸರಗೋಡಿಗೆ ತಲುಪುವರು. ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂ ದನ್ ಕೂಡಾ ಅವರ ಜತೆಗಿರುವರು.

ಮುಖ್ಯಮಂತ್ರಿ ಮತ್ತು ಸಚಿವರುಗಳು ತಂಗಲು ಕಾಸರಗೋಡು ಸರಕಾರಿ ಅತಿಥಿಗೃಹ ಮತ್ತು ಲೋಕೋಪಯೋಗಿ ಇಲಾಖೆಯ ವಿಶ್ರಾಂತಿಗೃಹದಲ್ಲಿ ಅಗತ್ಯದ ಸೌಕರ್ಯ ಏರ್ಪಡಿಸಲಾಗಿದೆ. ಕಾರ್ಯಕ್ರಮ ನಡೆಯುವ ಪ್ರದೇಶಗಳಿಗೆ ಮುಖ್ಯಮಂತ್ರಿ ಮತ್ತು ಇತರ ಸಚಿವರು ಸಾಗಲು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಸೌಕರ್ಯ ಒಳಗೊಂಡ ಕೆಎಸ್‌ಆರ್‌ಟಿಸಿಯ ವಿಶೇಷ ಬಸ್‌ನ್ನು ಮುಖ್ಯಮಂತ್ರಿ ನಾಳೆ   ಕಾಸರಗೋಡಿನಲ್ಲಿ ಉದ್ಘಾಟಿಸುವರು.  ಇದರ ಹೊರತಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸರಕಾರಿ ಅಧಿಕಾರಿಗಳಿಗೆ ತಂಗಲು ಜಿಲ್ಲೆಯ ವಿವಿಧೆಡೆಗಳಲ್ಲಿ ೬೫ರಷ್ಟು ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಇದರ ಹೊರತಾಗಿ ಇವರಿಗೆ ಪ್ರಯಾಣಿಸಲು ಅಗತ್ಯದಷ್ಟು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಮಂಜೂರು ಮಾಡಲಾಗಿದೆ. ವಾಹನ ನಿಬಿಡತೆಯನ್ನು ನಿಯಂತ್ರಿಸಲು ನಾಳೆ ಕಾಸರಗೋಡಿನಲ್ಲಿ ಬಿಗಿ   ನಿಯಂತ್ರಣವನ್ನು ಏರ್ಪಡಿಸಲಾಗಿದೆ.

ನವಕೇರಳ ಸಭೆ ರಾಜ್ಯ ಮಟ್ಟದ ಉದ್ಘಾಟನೆ ನಾಳೆ ಅಪರಾಹ್ನ ೩.೩೦ಕ್ಕೆ  ಪೈವಳಿಕೆ ಜಿಎಚ್‌ಎಸ್‌ಎಸ್‌ನಲ್ಲಿ  ನಡೆಯಲಿದೆ. ಕೇರಳ ಸಭೆಯ ಕಾಸರಗೋಡು ವಿಧಾನಸಭಾ ಕ್ಷೇತ್ರದ ಕಾರ್ಯಕ್ರಮ ನ. ೧೯ರಂದು ಬೆಳಿಗ್ಗೆ ೧೦ ಗಂಟೆಗೆ ಚೆಂಗಳ ಮಿನಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂದೇ ಉದುಮ, ಹೊಸ ದುರ್ಗ ಮತ್ತು ತೃಕ್ಕರಿಪುರ ಕ್ಷೇತ್ರಗಳಲ್ಲೂ ಈ ಕಾರ್ಯಕ್ರಮ ನಡೆಯಲಿದೆ.

ಇದೇ ವೇಳೆ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಲು ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಪೊಲೀಸರ ಹೊರತು ಕಲ್ಲಿಕೋಟೆ, ಕಣ್ಣೂರು ಜಿಲ್ಲೆಗಳಿಂದಲೂ ಹೆಚ್ಚುವರಿಯಾಗಿ ಪೊಲೀಸರನ್ನು ಕಾಸರಗೋಡಿಗೆ ಕರೆಸಲಾಗಿದೆ. ಭದ್ರತಾ ವ್ಯವಸ್ಥೆಯನ್ನು ಎಲ್ಲಿ, ಹೇಗೆ ಏರ್ಪಡಿಸ ಬೇಕೆಂಬ ಬಗ್ಗೆ ಇಂದು ಸಂಜೆಯೊಳಗೆ ನಿರ್ಧಾರವಾಗಲಿದೆ.

ನವಕೇರಳ ಕಾರ್ಯಕ್ರಮ ಒಂದು ಸರಕಾರಿ ಮಟ್ಟದ ಕಾರ್ಯಕ್ರಮವಾಗಿ ದ್ದರೂ ಅದರಲ್ಲಿ ಭಾಗವಹಿಸದೆ ಬಹಿಷ್ಕ ರಿಸಲು ವಿಪಕ್ಷವಾದ ಯುಡಿಎಫ್ ತೀರ್ಮಾನಿಸಿದೆ. ಈ ಕಾರ್ಯಕ್ರಮ ಎಡರಂಗದ ಚುನಾವಣಾ ಪ್ರಚಾರವಾಗಿದೆ. ಮಾತ್ರವಲ್ಲ ರಾಜ್ಯ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಬಿದ್ದು ಒದ್ದಾಡುತ್ತಿರುವ  ವೇಳೆಯಲ್ಲೇ ಇಂತಹ ಕಾರ್ಯಕ್ರಮ ನಡೆಸುವುದು ಒಂದು ದುಂದು ವೆಚ್ಚವಾಗಿದೆಯೆಂದು ಯುಡಿಎಫ್ ಆರೋಪಿಸಿದೆ.ಇನ್ನೊಂದೆಡೆ ಬಿಜೆಪಿಯೂ ಈ ಕಾರ್ಯಕ್ರಮವನ್ನು  ವಿರೋಧಿಸಿ ರಂಗಕ್ಕಿಳಿದಿದೆ. 

Leave a Reply

Your email address will not be published. Required fields are marked *

You cannot copy content of this page