ಪಂಚಾಯತ್ ಸದಸ್ಯತ್ವ: ಲೀಗ್‌ನ ಬೇಡಿಕೆ ಚುನಾವಣಾ ಆಯೋಗ ಅಂಗೀಕಾರ; ಎಸ್‌ಡಿಪಿಐ ಅರ್ಜಿ ತಿರಸ್ಕೃತ

ಕಾಸರಗೋಡು: ಪಂಚಾಯತ್ ಸದಸ್ಯತ್ವವನ್ನು ಮರು ಸ್ಥಾಪಿಸಬೇಕೆಂದು ಆಗ್ರಹಪಟ್ಟು ಮುಸ್ಲಿಂ ಲೀಗ್ ನೀಡಿದ ಅರ್ಜಿಯನ್ನು ರಾಜ್ಯ ಚುನಾವಣಾ ಆಯೋಗ ಅಂಗೀಕರಿಸಿದೆ. ಅದೇ ರೀತಿ ಎಸ್‌ಡಿಪಿಐ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದೆ.

ಪೈವಳಿಕೆ ಪಂಚಾಯತ್‌ನ ಎರಡನೇ ವಾರ್ಡ್ ಸದಸ್ಯೆ ಮುಸ್ಲಿಂ ಲೀಗ್‌ನ ಸಿಯಾಸುನ್ನೀಸರ ರಾಜೀನಾಮೆಯನ್ನು ಅಸಿಂಧುಗೊಳಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ಹಿಂದಿನಂತೆ ಸದಸ್ಯೆಯಾಗಿ ಮುಂದುವರಿಯಲು ಆಯೋಗ ಅನುಮತಿ ನೀಡಿದೆ. ಸೆಪ್ಟಂಬರ್ ೧೮ರಂದು ಸಿಯಾಸುನ್ನೀಸ ಗಜೆಟೆಡ್ ಆಫೀಸರ್ ದೃಢೀಕರಿಸಿದ ರಾಜೀನಾಮೆ ಪತ್ರವನ್ನು ಅಂಚೆ ಮೂಲಕ ಕಾರ್ಯದರ್ಶಿಗೆ ಕಳುಹಿಸಿದ್ದರು. ಬಳಿಕ ೨೦ರಂದು ರಾಜೀನಾಮೆಯನ್ನು ಹಿಂ ಪಡೆಯುವುದಾಗಿ ತಿಳಿಸಿ ಕಾರ್ಯದರ್ಶಿಗೆ ಪತ್ರ ಸಲ್ಲಿಸಿದ್ದರು.

ಅಕ್ಟೋಬರ್ ೩ರಂದು ಸಿಯಾಸು ನ್ನಿಸ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಸ್ವೀಕರಿಸಿದ ಆಯೋಗ ಅಕ್ಟೋಬರ್ ೧೫ರಂದು ರಾಜೀನಾಮೆ ಸಲ್ಲಿಸಿದ ಸದಸ್ಯೆ, ಪಂಚಾಯತ್ ಕಾರ್ಯದರ್ಶಿ, ರಾಜೀನಾಮೆ ಪತ್ರವನ್ನು ದೃಢೀಕರಿಸಿದ ಗಜೆಟೆಡ್ ಆಫೀಸರ್ ಆಗಿರುವ ಅಧ್ಯಾಪಕ ಎಂಬಿವರಿಂದ ನೇರವಾಗಿ ಹೇಳಿಕೆ ದಾಖಲಿಸಿದೆ. ಒತ್ತಾಯಕ್ಕೆ ಮಣಿದು ಪತಿ ಹಾಗೂ ಸ್ನೇಹಿತರ ಉಪಸ್ಥಿತಿಯಲ್ಲಿ ರಾಜೀನಾಮೆ ಪತ್ರ ಸಿದ್ಧಪಡಿಸಿರುವುದಾಗಿಯೂ, ಪತಿಯ ಸ್ನೇಹಿತ ಪತ್ರವನ್ನು ಅಂಚೆ ಮೂಲಕ ಕಳುಹಿಸಿಕೊಟ್ಟಿರುವುದಾಗಿ ಸಿಯಾಸುನ್ನಿಸ ಆಯೋಗದ ಮುಂದೆ ಹೇಳಿಕೆ ನೀಡಿದ್ದಾರೆ. ಈ ವಾದಗಳನ್ನು ಅಂಗೀಕರಿಸಿ ಸದಸ್ಯತ್ವವನ್ನು ಮರು ಸ್ಥಾಪಿಸಿರುವುದಾಗಿ ಆಯೋಗ ಆದೇಶವಿತ್ತಿದೆ.

ಇದೇ ವೇಳೆ ಮೊಗ್ರಾಲ್ ಪುತ್ತೂರು ಪಂಚಾಯತ್‌ನ ಎಸ್‌ಡಿಪಿಐ ಸದಸ್ಯನ ಅರ್ಜಿಯನ್ನು ಆಯೋಗ ತಿರಸ್ಕರಿಸಿದೆ. ವಿ.ಆರ್. ದೀಕ್ಷಿತ್‌ರ ಸದಸ್ಯತ್ವವನ್ನು ಮರು ಸ್ಥಾಪಿಸಬೇಕೆಂಬ ಬೇಡಿಕೆಯನ್ನು ತಿರಸ್ಕರಿಸಲಾಗಿದೆ. ಮಲೆಯಾಳ ಓದಲು ತಿಳಿಯದ ತನಗೆ ಬೆದರಿಕೆ ಯೊಡ್ಡಿ ಮಲೆಯಾಳದಲ್ಲಿ ಬರೆದ ಕಾಗದದ ಮೇಲೆ ಸಹಿ ಹಾಕಿಸಿರುವು ದಾಗಿ ದೀಕ್ಷಿತ್‌ರ ಹೇಳಿಕೆಯನ್ನು ಆಯೋಗ ಅಂಗೀಕರಿಸಿಲ್ಲ.

ಕಲ್ಲಂಗೈ ೧೪ನೇ ವಾರ್ಡ್ ಸದಸ್ಯನಾದ ದೀಕ್ಷಿತ್ ಅಕ್ಟೋಬರ್ ೧೨ರಂದು ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಅನಂತರ ರಾಜೀನಾಮೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ೧೬ರಂದು ಕಾರ್ಯದರ್ಶಿಗೆ ಪತ್ರ ನೀಡಿದ್ದರು. ಅನಂತರ ಈ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳಲು ಪಂಚಾಯತ್ ಕಾರ್ಯದರ್ಶಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ತಿಂಗಳ ೮ರಂದು ಅರ್ಜಿದಾರ, ಕಾರ್ಯದರ್ಶಿ ಎಂಬಿವರಿಂದ ಆಯೋಗ ನೇರವಾಗಿ ಹೇಳಿಕೆ ದಾಖಲಿಸಿಕೊಂಡಿತ್ತು. ಕಾರ್ಯದರ್ಶಿ ರಾಜೀನಾಮೆ ಪತ್ರ ಸ್ವೀಕರಿಸಿರುವುದರಲ್ಲಿ ಲೋಪ ಕಂಡುಬಂದಿಲ್ಲವೆಂದು ತಿಳಿದು ಆಯೋಗ ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿದೆ.

Leave a Reply

Your email address will not be published. Required fields are marked *

You cannot copy content of this page