ಪತಿಯಿಲ್ಲದ ಸಮಯದಲ್ಲಿ ಮನೆಗೆ ತಲುಪಿ ಗೃಹಿಣಿಯ ಕುತ್ತಿಗೆ ಕಡಿದು ಕೊಲೆ : ಆಭರಣಗಳ ಸಹಿತ ಪರಾರಿಯಾಗಲೆತ್ನಿಸಿದ ಸಹೋದರಿಯ ಪತಿ ಸೆರೆ
ಕುನ್ನಂಗುಳಂ: ಗೃಹಿಣಿಯನ್ನು ಕುತ್ತಿಗೆ ಕಡಿದು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ತೃಶೂರು ಆರ್ತಾಟ್ ಆರಾಧನಾ ಕೇಂದ್ರದ ಹಿಂದುಗಡೆಯಲ್ಲಿ ವಾಸಿಸುವ ನಾಡನ್‌ಚೇರಿ ನಿವಾಸಿ ಸಿಂಧು (55)ರನ್ನು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಆರೋಪಿಯಾದ ಸಿಂಧುವಿನ ಸಹೋದರಿಯ ಪತಿ ಕಣ್ಣನ್‌ನನ್ನು ಪೊಲೀಸರು ತಕ್ಷಣವೇ ಕಸ್ಟಡಿಗೆ ತೆಗೆದಿದ್ದಾರೆ. ಕಣ್ಣನ್‌ನ ಕೈಯಿಂದ ಸಿಂಧುರವರ ಆಭರಣಗಳನ್ನು ವಶಪಡಿಸಲಾಗಿದೆ. ನಿನ್ನೆ ಸಂಜೆ 7 ಗಂಟೆ ವೇಳೆಗೆ ಘಟನೆ ನಡೆದಿದೆ.
ಸಿಂಧುರವರ ಪತಿ ಮನೆಯ ಅಗತ್ಯಕ್ಕಿರುವ ಸಾಮಗ್ರಿಗಳನ್ನು ಖರೀದಿಸಲೆಂದು ಹೊರಗೆ ಹೋದ ಸಮಯದಲ್ಲಿ ಕೊಲೆ ಕೃತ್ಯ ನಡೆದಿದೆ. ಈ ವೇಳೆ ಸಿಂಧು ಮಾತ್ರವೇ ಮನೆಯಲ್ಲಿದ್ದರೆನ್ನಲಾಗಿದೆ. ಇವರ ಬೊಬ್ಬೆ ಕೇಳಿ ನೆರೆಮನೆಯವರು ಬಂದು ನೋಡಿದಾಗ ಬಾಗಿಲು ಮುಚ್ಚಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಅವರು ವಾಪಸಾಗಿದ್ದರು. ಆ ಬಳಿಕ ಪತಿ ಮನೆಗೆ ತಲುಪಿದಾಗ ಕೊಲೆ ಕೃತ್ಯ ಬಹಿರಂಗಗೊಂಡಿದೆ.
ಕತ್ತಿಯಿಂದ ಕಡಿದು ರುಂಡ ಬೇರ್ಪಡುವ ಸ್ಥಿತಿಯಲ್ಲಿದ್ದ ಸಿಂಧುರವರ ದೇಹದಲ್ಲಿದ್ದ ಚಿನ್ನಾಭರಣಗಳನ್ನು ಕೊಂಡುಹೋಗಲಾಗಿದೆ. ಇವರ ಮನೆಯ ಸಮೀಪವೇ ಮಾಸ್ಕ್ ಧರಿಸಿದ ಓರ್ವ ಯುವಕನನ್ನು ನೆರೆಮನೆಯವರು ನೋಡಿದ್ದಾರೆ. ಕುನ್ನಂಕುಳಂ ಪೊಲೀಸರು ಸ್ಥಳಕ್ಕೆ ತಲುಪಿ ವೈಜ್ಞಾನಿಕ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಕೊಲ್ಲಿಯಲ್ಲಿದ್ದ ಪತಿ ಮಣಿಕಂಠ ಇತ್ತೀಚೆಗೆ ಊರಿಗೆ ಹಿಂತಿರುಗಿದ್ದು, ಮನೆ ಸಮೀಪದಲ್ಲೇ ಗಿರಣಿಯೊಂದನ್ನು ಆರಂಭಿಸಿದ್ದರು. ಮೃತ ಸಿಂಧು ಪತಿ, ಮಕ್ಕಳಾದ ಆರ್ಯಶ್ರೀ, ಆದರ್ಶ್ ಎಂಬಿವರನ್ನು ಅಗಲಿದ್ದಾರೆ.