ಪಾರೆಕ್ಕೋಡಿ ಮಂಟಮೆ ರಸ್ತೆಗೆ ಸುರಿದದ್ದು 3 ಲಕ್ಷ ರೂ.: ಕಳಪೆ ಕಾಮಗಾರಿ ಬಗ್ಗೆ ಸ್ಥಳೀಯರು ರೋಷ
ಪೈವಳಿಕೆ: 3 ಲಕ್ಷ ರೂ. ವೆಚ್ಚ ಮಾಡಿ ಇತ್ತೀಚೆಗೆ ದುರಸ್ತಿಗೊಳಿಸಿದ ರಸ್ತೆಯೊಂದು ಉಪಯೋಗಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಪೈವಳಿಕೆ ಪಂಚಾಯತ್‌ನ 1ನೇ ವಾರ್ಡ್ ಪಾರೆಕ್ಕೋಡಿ ಮಂಟಪಮೆಯಿಂದ ಕುರುಡಪದವುಗೆ ಸಂಪರ್ಕಿಸುವ ರಸ್ತೆಯಲ್ಲಿ 150 ಮೀಟರ್ ಮಣ್ಣಿನ ರಸ್ತೆಯನ್ನು ಡಾಮರು ಹಾಕಿ ಅಭಿವೃದ್ಧಿಪಡಿಸ ಲಾಗಿತ್ತು. ಇದಕ್ಕೆ 3 ಲಕ್ಷ ರೂ. ವೆಚ್ಚ ಮಾಡಲಾಗಿತ್ತು. ಆದರೆ ದುರಸ್ತಿಗೊಳಿಸಿ ಒಂದು ತಿಂಗಳೊಳಗೆ ಈ ರಸ್ತೆಯಲ್ಲಿ ಸಂಚಾರ ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ಡಾಮರು ಎದ್ದು ಹೋಗಿ ಹೊಂಡ ಬಿದ್ದು ಮಣ್ಣಿನ ರಸ್ತೆಗಿಂತಲೂ ಕಡೆಯಾಗಿ ಸಂಚಾರ ದುಸ್ತರವಾಗುತ್ತಿದೆ. ಕಳಪೆ ಕಾಮ ಗಾರಿಯೇ ಈ ಸ್ಥಿತಿಗೆ ಕಾರಣವೆಂದು ಸ್ಥಳೀಯರು ದೂರಿದ್ದಾರೆ. ರಸ್ತೆ ದುರಸ್ತಿ ಬಗ್ಗೆ ಪಂಚಾಯತ್ ಅಧಿಕಾರಿಗಳು ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ವ್ಯವಸ್ಥಿತ ರೀತಿಯಲ್ಲಿ ಡಾಮರೀಕರಣ ಪುನಃ ನಡೆಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಸ್ಥಳೀ ಯರೆಲ್ಲರೂ ಸೇರಿ ಬೃಹತ್ ಪ್ರತಿಭಟನೆಗೆ ಮುಂದಾಗಬೇಕಾಗಿತೆಂದು ತಿಳಿಸಿದ್ದಾರೆ.