ಪಿಎಸ್‌ಸಿ ಸದಸ್ಯರ ವೇತನ ಹೆಚ್ಚಳ ಹಿಂತೆಗೆಯಬೇಕೆಂದು ಎಐಟಿಯುಸಿ ಆಗ್ರಹ
ಕಾಸರಗೋಡು: ರಾಜ್ಯ ಸರಕಾರ ಆರ್ಥಿಕ ಸಂದಿಗ್ಧತೆಯ ಹೆಸರಲ್ಲಿ ವಿವಿಧ ವಲಯಗಳ ಕಾರ್ಮಿಕರ ನ್ಯಾಯಯುತ ವೇತನ ಹೆಚ್ಚಳ ಎಂಬ ಬೇಡಿಕೆ, ಬಾಕಿ ಉಳಿಸಿರುವುದನ್ನು ಸರಿಯಾದ ಸಮಯಕ್ಕೆ ನೀಡದೆ ಇರುವ ಸಂದರ್ಭದಲ್ಲಿ ಪಿಎಸ್‌ಸಿ ಸದಸ್ಯರಿಗೆ ಧಾರಾಳವಾಗಿ ಸೌಲಭ್ಯಗಳನ್ನು ಘೋಷಿಸಿರುವುದು ಅನುಚಿತ ಹಾಗೂ ಎಡರಂಗ ಸರಕಾರಕ್ಕೆ ಸೂಕ್ತವಾದುದಲ್ಲವೆಂದು ಎಐಟಿಯುಸಿ ಕಾಸರಗೋಡು ಜಿಲ್ಲಾ ಕೌನ್ಸಿಲ್ ಸಭೆ ಅಭಿಪ್ರಾಯಪಟ್ಟಿದೆ. ಈ ತೀರ್ಮಾನ ವನ್ನು ಕೂಡಲೇ ರದ್ದುಗೊಳಿಸಬೇಕೆಂದು ಸಭೆ ಸರಕಾರಕ್ಕೆ ಆಗ್ರಹಿಸಿದೆ. ಶಾಲಾ ಅಡುಗೆ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕ ವಿತರಣಾ ವಲಯದ ತಾತ್ಕಾಲಿಕ ನೌಕರರು, ಸರಕಾರದ ವಿವಿಧ ಇಲಾಖೆಗಳ ತಾತ್ಕಾಲಿಕ ನೌಕರರು, ದಿನವೇತನ ಆಧಾರದಲ್ಲಿ ಕೆಲಸ ಮಾಡುವವರು ಇವರಿಗೆಲ್ಲ ಅರ್ಹವಾದ ವೇತನ ಹೆಚ್ಚಳ, ಸರಕಾರ ಘೋಷಿಸಿದ ಕನಿಷ್ಠ ಮಜೂರಿ ನೀಡದೆ ನಿಷೇಧಿಸು ತ್ತಿರುವ ಸಂದರ್ಭದಲ್ಲಿ ಸರಕಾರ ಕೈಗೊಂಡ ತೀರ್ಮಾನ ಸೂಕ್ತವಾದುದ ಲ್ಲವೆಂದು ಸಭೆ ಅಭಿಪ್ರಾಯಪಟ್ಟಿದೆ. ಈ ಬಗ್ಗೆ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಕೆ.ಎಸ್. ಕುರ‍್ಯಾಕೋಸ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ಕೃಷ್ಣನ್ ವರದಿ ಮಂಡಿಸಿದರು. ರಾಜ್ಯ ಸಮಿತಿ ಉಪಾಧ್ಯಕ್ಷ ಕೆ.ವಿ. ಕೃಷ್ಣನ್, ಕಾರ್ಯದರ್ಶಿ ಗೋವಿಂದನ್ ಪಳ್ಳಿಕಾಪಿಲ್, ಪಿ. ವಿಜಯ ಕುಮಾರ್ ಮಾತನಾಡಿದರು