ಪೈವಳಿಕೆಗೆ ಹರಿದುಬರತೊಡಗಿದ ಜನಪ್ರವಾಹ
ಮಂಜೇಶ್ವರ: ಜನರಿಂದ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ರ ನೇತೃತ್ವದಲ್ಲಿ ೨೦ ಸಚಿವರು ಭಾಗವಹಿಸುವ ನವಕೇರಳ ಸಭೆ ಉದ್ಘಾಟನೆಗೆ ಪೈವಳಿಕೆಯಲ್ಲಿ ಕ್ಷಣಗಣನೆ ಆರಂಭಗೊಂಡಿದೆ.
ಪೈವಳಿಕೆ ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಮೈದಾನದಲ್ಲಿ ಇಂದು ಅಪರಾಹ್ನ ೩.೩೦ಕ್ಕೆ ಆರಂಭಗೊಳ್ಳುವ ನವಕೇರಳ ಸಭೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು.
ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೆ. ರಾಜನ್ ಅಧ್ಯಕ್ಷತೆ ವಹಿಸುವರು. ರಾಜ್ಯದ ೨೦ ಸಚಿವರುಗಳು ಇದರಲ್ಲಿ ಭಾಗವಹಿಸುವರು. ಸಚಿವರುಗಳು ಮಾತ್ರವಲ್ಲದೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ವಿ. ವೇಣು ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳೂ ಭಾಗವಹಿಸುವರು.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳೂ ಸೇರಿದಂತೆ ರಾಜ್ಯದ ಎಲ್ಲಾ ೧೪೦ ವಿಧಾನಸಭಾ ಕ್ಷೇತ್ರಗಳಲ್ಲಿ ನವಕೇರಳ ಸಭೆ ಕಾರ್ಯಕ್ರಮ ನಡೆಯಲಿದೆ. ಇದರ ರಾಜ್ಯ ಮಟ್ಟದ ಉದ್ಘಾಟನೆ ಪೈವಳಿಕೆಯಲ್ಲಿ ಇಂದು ನಡೆಯಲಿದೆ. ಮುಖ್ಯಮಂತ್ರಿಯವರು ಇಂದು ಮಧ್ಯಾಹ್ನ ಕಾಸರಗೋಡಿಗೆ ತಲುಪುವರು.
ಇಂದು ಪೈವಳಿಕೆಯಿಂದ ಆರಂಭಗೊಳ್ಳುವ ನವಕೇರಳ ಸಭ ರಾಜ್ಯದ ಎಲ್ಲಾ ವಿಧಾನಸಭೆಗಳಲ್ಲೂ ಪರ್ಯಟನೆ ನಡೆಸಿದ ಬಳಿಕ ಡಿಸೆಂಬರ್ ೨೩ರಂದು ತಿರುವನಂತಪುರದ ವಟ್ಟಿಯೂರ್ಕಾವ್ ಮೈದಾನದಲ್ಲಿ ಸಮಾಪ್ತಿಗೊಳ್ಳಲಿದೆ.
ಕಾಸರಗೋಡು ವಿಧಾನಸಭಾ ಕ್ಷೇತ್ರದ ಕಾರ್ಯಕ್ರಮ ನಾಳೆ ಬೆಳಿಗ್ಗೆ ೧೧ಕ್ಕೆ ನಾಯಮ್ಮಾರಮೂಲೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಬಳಿಕ ಅಪರಾಹ್ನ ೩ ಗಂಟೆಗೆ ಉದುಮ ಮಂಡಲದ ಸಭೆ ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ, ಕಾಞಂಗಾಡ್ ದುರ್ಗಾಹೈಯರ್ ಸೆಕೆಂಡರಿ ಶಾಲೆಯಲ್ಲಿ, ತೃಕ್ಕರಿಪುರ ಮಂಡಲ ಸಭೆ ಸಂಜೆ ೬ಕ್ಕೆ ಕಲಿಕಡವು ಮೈದಾನದಲ್ಲಿ ನಡೆಯಲಿದೆ.