ಬಂಜರು ಭೂಮಿಯಲ್ಲಿ ತರಕಾರಿ ಕೃಷಿ ಬೆಳೆಸಿದ ಬೆಳ್ಳೂರು ಕುಟುಂಬಾರೋಗ್ಯ ಕೇಂದ್ರ ನೌಕರರು
ಬೆಳ್ಳೂರು: ಎಂಡೋಸಲ್ಫಾನ್ ವಿಷಮಳೆಸುರಿದ ಪ್ರದೇಶದಲ್ಲಿ ಸಂತ್ರಸ್ತರಿಗೆ ಔಷಧಗಳ ಜೊತೆಗೆ ಜೈವಿಕ ತರಕಾರಿ ನೀಡುವ ಉದ್ದೇಶದೊಂದಿಗೆ ಕುಟುಂಬ ಆರೋಗ್ಯ ಕೇಂದ್ರ ನೌಕರರ ಜೊತೆಗೆ ಪಂಚಾಯತ್ ಆಡಳಿತ ಸಮಿತಿ ಮತ್ತು ಇತರ ಸರಕಾರಿ ಇಲಾಖೆಗಳು ಜಂಟಿಯಾಗಿ ಆರಂಭಿಸಿದ ಬಂಜರು ಭೂಮಿಯಲ್ಲಿ ತರಕಾರಿ ಕೃಷಿ ಗಮನಸೆಳೆದಿದೆ. ಬೆಳ್ಳೂರು ಕುಟುಂಬಾರೋಗ್ಯ ಕೇಂದ್ರದ ನೌಕರರು ಹಾಗೂ ಪಂಚಾಯತ್‌ನ ಕೃಷಿ ಇಲಾಖೆ ಮತ್ತು ಇತರ ಸರಕಾರಿ ಇಲಾಖೆಗಳ ಸಹಕಾರದೊಂದಿಗೆ ವಿಷರಹಿತ ತರಕಾರಿ ಬೆಳೆ ಬೆಳೆಸಲಾಗಿದೆ. ಬಡ ರೋಗಿಗಳಿಗೆ, ಮಕ್ಕಳಿಗೆ, ಗರ್ಭಿಣಿಯರಿಗೆ ವಿಷ ರಹಿತ ತರಕಾರಿ ಉಚಿತವಾಗಿ ನೀಡು ವುದು ಎಂಬ ಉದ್ದೇಶದೊಂದಿಗೆ ಬೆಳ್ಳೂರು ಪಂಚಾಯತ್, ಕುಟುಂಬ ಆರೋಗ್ಯ ಕೇಂದ್ರ ಜಂಟಿಯಾಗಿ ಜ್ಯಾರಿಗೊಳಿಸಿದ ನೂತನ ಆಶಯವಾಗಿದೆ ಹಸಿರು ಸ್ಪರ್ಶ. ಬೆಳ್ಳೂರು ಕುಟುಂಬಾರೋಗ್ಯ ಕೇಂದ್ರಕ್ಕೆ ಸಮೀಪದಲ್ಲಿ ಬಂಜರಾಗಿ ಉಳಿದಿದ್ದ ಭೂಮಿಯನ್ನು ಕೃಷಿಗಾಗಿ ಆಯ್ದು ಪಂಚಾಯತ್ ಆಡಳಿತ ಸಮಿತಿ, ಕುಟುಂಬಾರೋಗ್ಯ ಕೇಂದ್ರದ ನೌಕರರ ನೇತೃತ್ವದಲ್ಲಿ ಸಂಘ-ಸಂಸ್ಥೆಗಳ ಸಹಾಯದೊಂದಿಗೆ ನೆಲಸಮತಟ್ಟುಗೊಳಿಸಲಾಯಿತು. ಈ ಭೂಮಿಯಲ್ಲಿ ಕುಟುಂಬಾರೋಗ್ಯ ಕೇಂದ್ರದ ಪಿಟಿಎಸ್ ಆದ ಕೆ. ತಂಬಾನ್‌ರ ನೇತೃತ್ವದಲ್ಲಿ ಕೃಷಿ ಕೈಗೊಂಡು ಉತ್ತಮ ಆರೈಕೆಯೊಂದಿಗೆ ೩ ಕ್ವಿಂಟಾಲ್‌ಗೂ ಅಧಿಕ ಸೌತೆಕಾ ಯಿ, ಅಲಸಂಡೆ, ಬೆಂಡೆಕಾಯಿ, ತೊಂಡೆಕಾಯಿ, ಕಲ್ಲಂಗಡಿ, ಹರಿವೆ, ಮೆಣಸು ಮೊದಲಾದ ತರಕಾರಿಗಳನ್ನು ಜೈವಿಕ ಕೃಷಿಯ ಮೂಲಕ ಉತ್ಪಾದಿಸಿ ಅರ್ಹರಾದ ಬಡ ರೋಗಿಗಳಿಗೆ ವಿತರಿಸಲಾಗಿದೆ. ಮಾದರಿ ಕೃಷಿಕನಾಗಿದ್ದಾರೆ ಕುಟುಂಬಾರೋಗ್ಯ ಕೇಂದ್ರದ ನೌಕರ ಕೆ. ತಂಬಾನ್. ವಿಷ ರಹಿತ ತರಕಾರಿ ಕೃಷಿ ಕೊಯ್ಲಿನ ಉದ್ಘಾಟನೆಯನ್ನು ಬೆಳ್ಳೂರು ಪಂಚಾಯತ್ ಅಧ್ಯಕ್ಷ ಎಂ. ಶ್ರೀಧರ ನಿರ್ವಹಿಸಿದರು. ಪಂಚಾಯತ್ ಉಪಾಧ್ಯಕ್ಷೆ ಕೆ. ಗೀತಾ ಅಧ್ಯಕ್ಷತೆ ವಹಿಸಿದರು. ದೇಶವೇ ಗೌರವಿಸಿದ ಬೆಳ್ಳೂರಿನ ಕೃಷಿಕ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಮುಖ್ಯ ಅತಿಥಿಯಾಗಿದ್ದರು. ಸ್ಥಾಯೀಸಮಿತಿ ಅಧ್ಯಕ್ಷರಾದ ಕೆ. ಜಯಕುಮಾರ್, ಪಿ.ಚಂದ್ರಹಾಸ ರೈ, ಸುಜಾತಾ ಎಂ ರೈ, ಪಂ. ಸದಸ್ಯರಾದ ಬಿ.ಎನ್. ಗೀತಾ,ಕೆ. ಭಾಗೀರಥಿ,ಡಾ. ಪಿ.ವಿ. ಜ್ಯೋತಿ ಮೋಳ್, ಕೃಷಿ ಅಧಿಕಾರಿ ಪಿ.ಅದ್ಪೈತ್, ವಿಲ್ಲೇಜ್ ಆಫೀಸರ್ ಹಿಜಿನ್ ಪೋಳ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆ. ತಂಬಾನ್ ಅವರನ್ನು ಗೌರವಿಸಲಾಯಿತು. ಪ್ರಥಮವಾಗಿ ಕೊಯ್ಲು ನಡೆಸಿದ ತರಕಾರಿಗಳನ್ನು ಕುಟುಂಬಾರೋಗ್ಯ ಕೇಂದ್ರಕ್ಕೆ ತಲುಪಿದ ರೋಗಿಗಳಿಗೆ ಹಾಗೂ ಬೆಳ್ಳೂರು ಬಡ್ಸ್ ಶಾಲೆಯ ಮಕ್ಕಳಿಗೆ, ಕಿನ್ನಿಂಗಾರು ಅಂಗನವಾಡಿಯ ಮಕ್ಕಳಿಗೆ ವಿತರಿಸಲಾಯಿತು.