ಬದಿಯಡ್ಕದಲ್ಲಿ ಬಿಜೆಪಿ ಕಾರ್ಕರ್ತನಿಗೆ ಇರಿತ: ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆಯತ್ತ
ಬದಿಯಡ್ಕ: ಬಿಜೆಪಿ ಕಾರ್ಯಕರ್ತನಾದ ವಳಮಲೆ ನಿವಾಸಿ ರಂಜಿತ್ (30) ಎಂಬವರಿಗೆ ಇರಿದು ಗಾಯಗೊಳಿಸಿದ ಪ್ರಕರಣದಲ್ಲಿ ಆರೋಪಿಗಳನ್ನು ಶೀಘ್ರ ಸೆರೆ ಹಿಡಿಯಬೇಕೆಂದ ಬಿಜೆಪಿ ಒತ್ತಾಯಿಸಿದೆ. ಘಟನೆ ನಡೆದು ಒಂದು ವಾರವಾಗುತ್ತಾ ಬಂದರೂ ಆರೋಪಿಗಳನ್ನು ಸೆರೆ ಹಿಡಿಯಲು ಪೊಲೀಸರು ಮುಂದಾಗದಿರುವುದು ಖಂಡನೀಯವೆಂದು ಬಿಜೆಪಿ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ ತಿಳಿಸಿದ್ದಾರೆ. ಬಿಜೆಪಿ ಕಾರ್ಯಕರ್ತನಿಗೆ ಇರಿದ ಪ್ರಕರಣದಲ್ಲಿ ಇಬ್ಬರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆಯೇ ಹೊರತು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿಲ್ಲ. ಶಾಂತ ರೀತಿಯಲ್ಲಿರುವ ಬದಿಯಡ್ಕ ಹಾಗೂ ಪರಿಸರ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತನಿಗೆ ಇರಿದು ಅಶಾಂತಿ ಸೃಷ್ಟಿಸಲು ದುಷ್ಕರ್ಮಿಗಳು ಪ್ರಯತ್ನಿಸಿದ್ದಾರೆ. ಆದರೆ ಇಂತಹ ಕೃತ್ಯ ನಡೆಸಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಇನ್ನೂ ಕೂಡಾ ಆರೋಪಿಗಳನ್ನು ಬಂಧಿಸಲು ಮುಂದಾಗದಿದ್ದಲ್ಲಿ ಪೊಲೀಸ್ ಠಾಣೆಗೆ ಮಾರ್ಚ್ ಸಹಿತ ತೀವ್ರ ಪ್ರತಿಭಟನೆ ನಡೆಸುವ ಬಗ್ಗೆ ಬಿಜೆಪಿ ಆಲೋಚಿಸುವುದಾಗಿ ಗೋಪಾಲಕೃಷ್ಣ ತಿಳಿಸಿದ್ದಾರೆ. ಈ ತಿಂಗಳ ೮ರಂದು ಮಧ್ಯಾಹ್ನ ರಂಜಿತ್ ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಪೆರಡಾಲಗುತ್ತು ಎಂಬಲ್ಲಿ ಅವರನ್ನು ತಡೆದು ನಿಲ್ಲಿಸಿದ ತಂಡ ಇರಿದು ಗಾಯಗೊಳಿಸಿದ ಘಟನೆ ನಡೆದಿತ್ತು.