ಬಾವಿಗೆ ಬಿದ್ದ ಕಾಡುಕೋಣ ಜೀವಾಪಾಯದಿಂದ ಪಾರು
ಹೊಸದುರ್ಗ: ಹಲವು ದಿನಗಳಿಂದ ನಾಡಿನಲ್ಲಿ ತಿರುಗಾಡಿ ಜನರಿಗೆ ಆತಂಕ ಹುಟ್ಟಿಸಿದ್ದ ಕಾಡುಕೋಣ ಬಾವಿಗೆ ಬಿದ್ದ ಘಟನೆ ನಡೆದಿದೆ. ಮಡಿಕೈ ಮನ್ನುರೋಡ್ ನಾಂದಂಕುಳಿ ಎಂಬಲ್ಲಿ ನಿನ್ನೆ ಅಪರಾಹ್ನ ರಮಣ್ ಎಂಬವರ ಮನೆ ಹಿತ್ತಿಲಿನಲ್ಲಿರುವ ಬಾವಿಗೆ ಕಾಡು ಕೋಣ ಬಿದ್ದಿದೆ. ಮಧ್ಯಾಹ್ನ ವೇಳೆ ಮೇಲ್ಪಚ್ಚೇರಿ ಭಾಗದಲ್ಲಾಗಿ ಕಾಡುಕೋಣ ಓಡುತ್ತಿರುವುದನ್ನು ನಾಗರಿಕರು ಕಂಡಿದ್ದರು. ಇದರಿಂದ ನಾಗರಿಕರು ತೀವ್ರ ಆತಂಕಗೊಂಡಿದ್ದರು. ನೀಲೇಶ್ವರ ಪೊಲೀಸರು ಹಾಗೂ ನಾಗರಿಕರು ವ್ಯಾಪಕವಾಗಿ ಶೋಧ ನಡೆಸಿದರೂ ಪತ್ತೆಹಚ್ಚಲು ಸಾಧ್ಯವಾಗಿರ ಲಿಲ್ಲ. ಈ ಮಧ್ಯೆ ಸಂಜೆ ಹೊತ್ತಿನಲ್ಲಿ ಕಾಡುಕೋಣ ಬಾವಿಯಲ್ಲಿರುವುದು ಕಂಡು ಬಂದಿದೆ. ವಿಷಯ ತಿಳಿದು ನೀಲೇಶ್ವರ ಎಸ್ಐ ಮಧುಸೂದನ್ ನೇತೃತ್ವ ದಲ್ಲಿ ಪೊಲೀಸ್ ತಂಡ ಹಾಗೂ ಅರಣ್ಯಾಧಿಕಾರಿಗಳು ತಲುಪಿ ಜೆಸಿಬಿ ಬಳಸಿ ಬಾವಿಯಿಂದ ದಾರಿ ಮಾಡಿಕೊಟ್ಟಿದ್ದಾರೆ. ಹಲವು ಗಂಟೆಗಳ ಪ್ರಯತ್ನದ ಬಳಿಕ ಇಂದು ಮುಂಜಾನೆ ವೇಳೆ ಕಾಡುಕೋಣವನ್ನು ಬಾವಿಯಿಂದ ಪಾರು ಮಾಡಲಾಯಿತು. ಬಾವಿಗೆ ಬಿದ್ದ ಕಾಡುಕೋಣದ ಕಾಲಿಗೆ ಗಾಯವಾಗಿದ್ದು ನಡೆಯಲು ಕಷ್ಟಪಡುತ್ತಿದೆಯೆನ್ನಲಾಗಿದೆ.